113 ಎಸೆತಗಳಲ್ಲಿ 316 ರನ್​ ಸಿಡಿಸಿದರೂ ಟೀಕೆ ಎದುರಿಸಿದ ಇಂಗ್ಲೆಂಡ್​ ಕ್ಲಬ್​ ಕ್ರಿಕೆಟಿಗ!

cric club
Published on

ಲಂಡನ್​: ಇಂಗ್ಲೆಂಡ್​ನ ಕ್ಲಬ್​ ಕ್ರಿಕೆಟಿಗ ಕ್ರಿಸ್​ ಹಾಲಿಡೇ, ಹೋಲ್ಯಾಂಡ್ಸ್​ವೇನ್​ ತಂಡದ ಪರ 113 ಎಸೆತಗಳಲ್ಲಿ 316 ರನ್​ ಸಿಡಿಸುವ ಮೂಲಕ ಡೆನ್​ಬಿ ಕ್ರಿಕೆಟ್​ ಕ್ಲಬ್​ ವಿರುದ್ಧ 378 ರನ್​ಗಳ ಭರ್ಜರಿ ಗೆಲುವಿಗೆ ನೆರವಾದರು. 21 ಬೌಂಡರಿ ಮತ್ತು 34 ಸಿಕ್ಸರ್​ ಒಳಗೊಂಡ ಅಮೋಘ ಇನಿಂಗ್ಸ್​ ಅವರದಾಗಿತ್ತು. ಆದರೂ ಅವರು ಪಂದ್ಯದ ಬಳಿಕ ಕ್ರಿಕೆಟ್​ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳನ್ನು ಎದುರಿಸಬೇಕಾಯಿತು.

ಹಡರ್ಸ್​ಫೀಲ್ಡ್​ ಕ್ರಿಕೆಟ್​ ಲೀಗ್​ನ ಭಾಗವಾಗಿದ್ದ ಈ ಪಂದ್ಯದಲ್ಲಿ ಕ್ರಿಸ್​ ಹಾಲಿಡೇ, ನಾಯಕ ಎಸ್​ಪಿ ಸಿಂಗ್​ (62) ಜತೆಗೂಡಿ ಎದುರಾಳಿ ಬೌಲರ್​ಗಳನ್ನು ಬೆಂಡೆತ್ತಿದರು. ಅವರ ತ್ರಿಶತಕ ಕೇವಲ 110 ಎಸೆತಗಳಲ್ಲೇ ಪೂರ್ಣಗೊಂಡಿತ್ತು. ಅಲ್ಲದೆ ಅವರು ಗಳಿಸಿದ 316 ರನ್​ಗಳ ಪೈಕಿ 288 ರನ್​ಗಳು ಕೇವಲ ಬೌಂಡರಿ-ಸಿಕ್ಸರ್​ಗಳಿಂದಲೇ ಬಂದಿದ್ದವು. 45 ಎಸೆತಗಳಲ್ಲಿ ಶತಕ ಪೂರೈಸಿದ್ದ ಅವರು ದ್ವಿಶತಕಕ್ಕಾಗಿ ಮತ್ತೆ 36 ಎಸೆತ ಬಳಸಿದರು. ಬಳಿಕ ತ್ರಿಶತಕ ಪೂರೈಸಲು ಮತ್ತೆ 29 ಎಸೆತಗಳನ್ನಷ್ಟೇ ಎದುರಿಸಿದರು. ಇದರಿಂದಾಗಿ ಹೋಲ್ಯಾಂಡ್ಸ್​ವೇನ್​ ತಂಡ 3 ವಿಕೆಟ್​ಗೆ 456 ರನ್​ ಕೂಡಿಹಾಕಿದರೆ, ಪ್ರತಿಯಾಗಿ ಡೆನ್​ಬಿ ಕ್ರಿಕೆಟ್​ ಕ್ಲಬ್​ ತಂಡ 19.1 ಓವರ್​ಗಳಲ್ಲಿ 78 ರನ್​​ಗಳಿಗೆ ಸರ್ವಪತನ ಕಂಡಿತು.

ಕ್ರಿಸ್​ ಹಾಲಿಡೇ ಅವರ ಈ ಅಮೋಘ ಆಟ ಎಲ್ಲರ ಗಮನ ಸೆಳೆದರೂ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಕ್ರೀಡಾಸ್ಫೂರ್ತಿ ಟೀಕೆಗೆ ಒಳಗಾಗಿದೆ. ಅಮೆಚೂರು ಕ್ರಿಕೆಟ್​ ಆಟದ ಕ್ರೀಡಾಸ್ಫೂರ್ತಿಯ ಉಲ್ಲಂಘನೆ ಇದಾಗಿದೆ ಎಂಬುದು ಅವರ ಟೀಕೆಗಳಿಗೆ ಕಾರಣವಾಗಿದೆ. ಹಾಲಿಡೇ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು, 'ನಾನು ನಿವೃತ್ತಿ ಹೊಂದಲು ಸಿದ್ಧನಾಗಿದ್ದೆ. ಆದರೆ ತಂಡದಿಂದ ನನಗೆ ಆಟ ಮುಂದುವರಿಸುವಂತೆ ಸೂಚನೆ ಬಂದಿತ್ತು. ನಾನು ಬೌಂಡರಿ ಬಾರಿಸಿ ದ್ವಿಶತಕ ಪೂರೈಸಿದಾಗಲೇ ನಿವೃತ್ತಿಯಾಗುವ ಆಫರ್​ ನೀಡಿದ್ದೆ. ಆದರೆ ದಾಖಲೆಗೆ ಇನ್ನು 80 ರನ್​ ಅಗತ್ಯವಿದೆ ಎಂದು ತಂಡದಿಂದ ಮಾಹಿತಿ ಬಂದಿತು. ಆದರೆ ಆ ದಾಖಲೆ ಏನೆಂದು ನನಗೆ ಗೊತ್ತಿಲ್ಲ' ಎಂದು ಹೇಳಿದ್ದಾರೆ.

ಹಾಲಿಡೇ ಅವರು 110 ರನ್​ ಗಳಿಸಿದ್ದಾಗ ಡೆನ್​ಬಿ ತಂಡದ ಆಟಗಾರರು ಕ್ಯಾಚ್​ ಕೈಚೆಲ್ಲಿದ್ದರು. ಅಲ್ಲಿಂದ ನಂತರ ಹಾಲಿಡೇ ಅವರು ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿದರು. ಕರೊನಾ ಹಾವಳಿಯಿಂದಾಗಿ ಇಂಗ್ಲೆಂಡ್​ನಲ್ಲಿ ಮಾರ್ಚ್​ನಲ್ಲಿ ಸ್ಥಗಿತಗೊಂಡಿದ್ದ ಕ್ಲಬ್​ ಕ್ರಿಕೆಟ್​ ಚಟುವಟಿಕೆ ಕಳೆದ ಜುಲೈನಲ್ಲಿ ಪುನರಾರಂಭ ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net