More

    ಯುಎಇಯಲ್ಲೂ ಕರೊನಾ ಪ್ರಕರಣ ಏರಿಕೆ, ಐಪಿಎಲ್​ಗೆ ಆತಂಕ!

    ನವದೆಹಲಿ/ದುಬೈ: ಐಪಿಎಲ್​ ಆವೃತ್ತಿಗಾಗಿ ತಂಡಗಳು ಯುಎಇಗೆ ಪ್ರಯಾಣ ಆರಂಭಿಸಿರುವ ನಡುವೆ ಅರಬ್​ ರಾಷ್ಟ್ರದಲ್ಲಿ ಈಗ ಕರೊನಾ ವೈರಸ್​ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಬಿಸಿಸಿಐಗೆ ಹೊಸ ತಲೆನೋವು ಕೂಡ ಶುರುವಾಗಿದೆ.

    ಇತ್ತೀಚೆಗೆ ನಿಯಂತ್ರಣಕ್ಕೆ ಬಂದಿದ್ದ ಕರೊನಾ ಪ್ರಕರಣಗಳ ಸಂಖ್ಯೆ ಕಳೆದ ಕೆಲ 2-3 ದಿನಗಳಿಂದ ಏರಿಕೆ ಕಾಣುತ್ತಿದೆ. ಯುಎಇ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಬುಧವಾರ ಒಟ್ಟು 461 ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇನ್ನು 131 ಮಂದಿ ಚೇತರಿಕೆ ಹೊಂದಿದ್ದಾರೆ. ಇದಕ್ಕೆ ಮುನ್ನ ಮಂಗಳವಾರ 365 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಇಬ್ಬರು ಮೃತಪಟ್ಟಿದ್ದರು. ಕಳೆದ ಭಾನುವಾರ 210, ಸೋಮವಾರ 229 ಪ್ರಕರಣಗಳು ದಾಖಲಾಗಿದ್ದವು. ಇದರಿಂದ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 65,802ಕ್ಕೇರಿದೆ. ಒಟ್ಟು 58,153 ಮಂದಿ ಚೇತರಿಕೆ ಕಂಡಿದ್ದು, 369 ಮಂದಿ ಮೃತಪಟ್ಟಿದ್ದಾರೆ.

    ಕಳೆದ ವಾರ ಯುಎಇಯಲ್ಲಿ ಪತ್ತೆಯಾಗುತ್ತಿದ್ದ ಕರೊನಾ ಪ್ರಕರಣಗಳಿಗಿಂತ ದುಪ್ಪಟ್ಟು ಪ್ರಕರಣಗಳು ಈ ವಾರ ದಾಖಲಾಗಿವೆ. ಕರೊನಾ ಪ್ರಕರಣಗಳ ಸಂಖ್ಯೆ ಏರುತ್ತಿರುವುದನ್ನು ಗಮನಿಸಿದ್ದೇವೆ ಎಂದು ಯುಎಇ ಸರ್ಕಾರ ಕೂಡ ಗುರುವಾರ ತಿಳಿಸಿದೆ. ಈ ಮುನ್ನ ಮೇ ಮಧ್ಯಭಾಗದಲ್ಲಿ ಯುಎಇಯಲ್ಲಿ ಹೆಚ್ಚಿನ ಕರೊನಾ ಪ್ರಕರಣಗಳು ದಾಖಲಾಗಿದ್ದವು. ಆದರೆ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಭಾರತದಲ್ಲಿ ಕರೊನಾ ಹಾವಳಿ ಹೆಚ್ಚಾದ ಕಾರಣದಿಂದಾಗಿ ಟೂರ್ನಿಯನ್ನು ಯುಎಇಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಈಗ ಅಲ್ಲೂ ಕರೊನಾ ಹಾವಳಿ ಶುರುವಾಗಿರುವುದು ಹೊಸ ಸವಾಲು ಸೃಷ್ಟಿಸಿದೆ.

    ಇದನ್ನೂ ಓದಿ: ‘ಡಿಯರ್​​ ಮಹೇಂದ್ರಾ…’: ಎಂ.ಎಸ್​.​ ಧೋನಿಗೆ ಪ್ರಧಾನಿ ಮೋದಿಯವರಿಂದ ಸುದೀರ್ಘ ಪತ್ರ

    ಈ ಬೆಳವಣಿಗೆಗಳಿಂದಾಗಿ ಬಿಸಿಸಿಐ, ಯಾವುದೇ ಕಾರಣಕ್ಕೂ ಜೈವಿಕ-ಸುರಕ್ಷಾ ಮಾರ್ಗಸೂಚಿಗಳನ್ನು ಉಲ್ಲಂಘಿಸದಂತೆ ಆಟಗಾರರಿಗೆ ಕಟ್ಟಪ್ಪಣೆ ವಿಧಿಸಿದೆ. ಆಟಗಾರರು ಮತ್ತು ತಂಡದ ಸಿಬ್ಬಂದಿ ತಮ್ಮನ್ನು ತಾವು ರಸಿಕೊಳ್ಳುವ ಹೊಣೆಯನ್ನೂ ಹೊಂದಿರುತ್ತಾರೆ. ಯಾರೋ ಒಬ್ಬರ ತಪ್ಪಿನಿಂದಾಗಿ ಎಲ್ಲರೂ ಶಿಕ್ಷೆ ಅನುಭವಿಸುವಂತಾಗಬಹುದು. ಹೀಗಾಗಿ ಎಲ್ಲರೂ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಕೆರಿಬಿಯನ್​​ ಟಿ20 ಲೀಗ್​ನಲ್ಲಿ ಮಿಂಚಿದ ಹೆಟ್ಮೆಯರ್​, ಕೀಮೊ ಪೌಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts