ಟೀಮ್​ ಇಂಡಿಯಾದ ಆ ಆಟಗಾರನ ಬಗ್ಗೆ ಮಾತನಾಡಲು ನನಗೆ ಹಕ್ಕಿಲ್ಲ! ಶಿವಂ ದುಬೆ ಅಚ್ಚರಿಯ ಹೇಳಿಕೆ

Shivam Dube
Published on

ನ್ಯೂಯಾರ್ಕ್: ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದೆ. ಮೊದಲ ಪಂದ್ಯದಿಂದಲೇ ತಮ್ಮ ಸಾಮರ್ಥ್ಯ ತೋರುತ್ತಿದೆ. ಮೊದಲು ಐರ್ಲೆಂಡ್ ತಂಡವನ್ನು ಸೋಲಿಸಿತು. ಇದಾದ ಬಳಿಕ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹಾಗೂ ಆತಿಥೇಯ ಯುಎಸ್​ಎ ತಂಡವನ್ನು ಸೋಲಿಸಿತು. ಈ ಹ್ಯಾಟ್ರಿಕ್ ಗೆಲುವಿನೊಂದಿಗೆ ಭಾರತ ಸೂಪರ್-8 ಹಂತಕ್ಕೆ ಅರ್ಹತೆ ಪಡೆದಿದೆ. ಗ್ರೂಪ್ ಹಂತದಲ್ಲಿ ಕೆನಡಾ ವಿರುದ್ಧದ ಇಂದು (ಜೂನ್​ 15) ನಡೆಯಲಿರುವ ಅಂತಿಮ ಪಂದ್ಯದಲ್ಲಿ ಗೆದ್ದು ಎದುರಾಳಿ ತಂಡಗಳಿಗೆ ಪ್ರಬಲ ಎಚ್ಚರಿಕೆ ನೀಡಲು ಟೀಮ್​ ಇಂಡಿಯಾ ಸಜ್ಜಾಗಿದೆ.

ಟೀಮ್​ ಇಂಡಿಯಾದ ಬ್ಯಾಟಿಂಗ್ ಯೂನಿಟ್ ಫಾರ್ಮ್‌ಗೆ ಬರುತ್ತಿದೆ. ಈಗಾಗಲೇ ಬೌಲರ್‌ಗಳು ತಮ್ಮ ಬಿರುಸಿನ ಬೌಲಿಂಗ್ ಮಾಡುತ್ತಿದ್ದು, ಟೀಮ್​ ಇಂಡಿಯಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ತಂಡದಲ್ಲಿ ಎಲ್ಲವೂ ಸರಿಯಾಗಿದ್ದರೂ, ಪ್ರತಿಯೊಬ್ಬರೂ ಆ ಒಬ್ಬ ಆಟಗಾರನಿಗೆ ಹೆದರುತ್ತಾರೆ. ಅವರ ಫಾರ್ಮ್ ಇದೀಗ ತಂಡಕ್ಕೆ ಆತಂಕ ತಂದಿದೆ.

ತಂಡದ ಸ್ಟಾರ್​ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಫಾರ್ಮ್ ಟೀಮ್​ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಆತಂಕ ತಂದಿದೆ. ಮೆಗಾ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಕಿಂಗ್ ಕೇವಲ 5 ರನ್ ಗಳಿಸಿದ್ದಾರರ. ಈ ರೀತಿಯ ವೈಫಲ್ಯಗಳಿಂದ ತಂಡಕ್ಕೆ ಹೊರೆಯಾಗುತ್ತಿರುವ ಕಾರಣ ಅಭಿಮಾನಿಗಳು ಕೂಡ ಕಂಗಾಲಾಗಿದ್ದಾರೆ. ಪಿಂಚ್ ಹಿಟ್ಟರ್ ಶಿವಂ ದುಬೆ ಕೂಡ ಈ ವಿಷಯದ ಬಗ್ಗೆ ಮಾಧ್ಯಮಗಳಿಂದ ಪ್ರಶ್ನೆಯನ್ನು ಎದುರಿಸಿದರು.

ವಿರಾಟ್ ವೈಫಲ್ಯದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೆಲವು ವರದಿಗಾರರು ದುಬೆ ಅವರನ್ನು ಕೇಳಿದರು. ಈ ವೇಳೆ ದುಬೆ ಅವರಿಂದ ಅನಿರೀಕ್ಷಿತ ಉತ್ತರ ಬಂತು. ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಲು ನಾನು ಯಾರು ಎಂದ ದುಬೆ, ಕಿಂಗ್​ ಕೊಹ್ಲಿ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದರು. ಅವರೊಬ್ಬ ಹಿರಿಯ ಬ್ಯಾಟರ್ ಎಂದು ಹೇಳಿದರು.

ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಲು ನಾನು ಯಾರು? ಕಳೆದ ಮೂರು ಪಂದ್ಯಗಳಲ್ಲಿ ಅವರು ರನ್ ಗಳಿಸಿಲ್ಲ ನಿಜ. ಆದರೆ, ನೀವು ಅದನ್ನು ಹೇಗೆ ಟೀಕಿಸಬಹುದು? ಮುಂದಿನ ಮೂರು ಪಂದ್ಯಗಳಲ್ಲಿ 3 ಶತಕ ಬಾರಿಸಿದರೂ ಅಚ್ಚರಿಪಡಬೇಕಾಗಿಲ್ಲ. ಕೊಹ್ಲಿ ಅವರ ಫಾರ್ಮ್ ಮತ್ತು ಅವರ ಬ್ಯಾಟಿಂಗ್ ಬಗ್ಗೆ ನಾನು ಚರ್ಚಿಸಲು ಬಯಸುವುದಿಲ್ಲ. ವಿರಾಟ್ ಏನೆಂದು ಎಲ್ಲರಿಗೂ ಗೊತ್ತು. ಅವರ ಆಟದ ಶೈಲಿಯ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ. ಅವರು ಲಯಕ್ಕೆ ಬಂದರೆ ಯಾರೂ ತಡೆಯಲಾರರು ಎಂದು ದುಬೆ ಸ್ಪಷ್ಟಪಡಿಸಿದರು.

ಇನ್ನು ಮೆಗಾ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ವಿಫಲರಾದ ದುಬೆ, ಯುಎಸ್​ಎ ವಿರುದ್ಧ 31 ರನ್ ಗಳಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಯಾವುದೇ ಒತ್ತಡವಿಲ್ಲ. ಆರಂಭದಲ್ಲಿ ವೈಫಲ್ಯ ಕಂಡರೂ ತಂಡದ ಮ್ಯಾನೇಜ್‌ಮೆಂಟ್‌ ಬೆಂಬಲ ನೀಡಿದ್ದು, ಪ್ಲಾನ್‌ಗೆ ತಕ್ಕಂತೆ ಆಡುತ್ತಿದ್ದೇನೆ ಎಂದರು. ಇಲ್ಲಿನ ಪಿಚ್​ಗಳಲ್ಲಿ ಸಿಕ್ಸರ್ ಬಾರಿಸುವುದು ಕಷ್ಟ. ಆದರೆ, ಕ್ರೀಸ್​ಗೆ ಬಂದರೆ ಏನು ಬೇಕಾದರೂ ಸಾಧ್ಯ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net