ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಗಂಗೂಲಿ ದಾಖಲೆ ಮುರಿದ ಡೆವೊನ್​ ಕಾನ್​ವೇ

dada web
Published on

ಲಾರ್ಡ್ಸ್​: ಎಡಗೈ ಆರಂಭಿಕ ಡೆವೊನ್​ ಕಾನ್​ವೇ (136*ರನ್​, 240 ಎಸೆತ, 16 ಬೌಂಡರಿ) ಪದಾರ್ಪಣೆ ಪಂದ್ಯದಲ್ಲೇ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ನ್ಯೂಜಿಲೆಂಡ್​ ತಂಡ ಮೊದಲ ಟೆಸ್ಟ್​ನಲ್ಲಿ ಆತಿಥೇಯ ಇಂಗ್ಲೆಂಡ್​ ಎದುರು ಬೃಹತ್​ ಮೊತ್ತದತ್ತ ಮುನ್ನಡೆದಿದೆ. ಲಾರ್ಡ್ಸ್​ನಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಜಯಿಸಿ ಮೊದಲು ಬ್ಯಾಟಿಂಗ್​ ಮಾಡಿದ ನ್ಯೂಜಿಲೆಂಡ್​ ತಂಡ ದಿನದಂತ್ಯಕ್ಕೆ 3 ವಿಕೆಟ್​ಗೆ 246 ರನ್​ ಗಳಿಸಿದೆ.

29 ವರ್ಷದ ಕಾನ್​ವೇ ಪದಾರ್ಪಣೆ ಟೆಸ್ಟ್​ನಲ್ಲೇ ಶತಕ ಸಿಡಿಸಿದ ನ್ಯೂಜಿಲೆಂಡ್​ನ 12ನೇ ಆಟಗಾರ ಮತ್ತು ಐತಿಹಾಸಿಕ ಲಾರ್ಡ್ಸ್​ ಮೈದಾನದಲ್ಲಿ ಈ ಸಾಧನೆ ಮಾಡಿದ 6ನೇ ಬ್ಯಾಟ್ಸ್​​ಮನ್​ ಎನಿಸಿದರು. ಜತೆಗೆ ಲಾರ್ಡ್ಸ್​ನಲ್ಲಿ ಪದಾರ್ಪಣೆಯ ಇನಿಂಗ್ಸ್​ನಲ್ಲೇ ಗರಿಷ್ಠ ರನ್​ ಗಳಿಸಿದ ದಾಖಲೆ ಬರೆದರು. 1996ರಲ್ಲಿ ಭಾರತದ ಸೌರವ್​ ಗಂಗೂಲಿ ಪದಾರ್ಪಣೆಯ ಟೆಸ್ಟ್​ನಲ್ಲೇ 131 ರನ್​ ಗಳಿಸಿದ್ದು, ಹಿಂದಿನ ದಾಖಲೆಯಾಗಿತ್ತು. ಲಾರ್ಡ್ಸ್​ನಲ್ಲಿ ಪದಾರ್ಪಣೆಯ ಟೆಸ್ಟ್​ನಲ್ಲೇ ಶತಕ ಸಿಡಿಸಿದ ಮೊದಲಿಗರೆಂಬ ಹೆಗ್ಗಳಿಕೆಯೂ ಕಾನ್​ವೇ ಅವರದಾಗಿದೆ.

ಒಲಿ ರಾಬಿನ್​ಸನ್​ (50ಕ್ಕೆ 2) ಮಾರಕ ದಾಳಿಯಿಂದ ತತ್ತರಿಸಿದ್ದ ಕಿವೀಸ್​ಗೆ ಕಾನ್​ವೇ ಶತಕದಾಸರೆ ನೀಡಿದರು. ಕಾನ್​ವೇ ಹಾಗೂ ಹೆನ್ರಿ ನಿಕೋಲಸ್​ (46*) ಜೋಡಿ ಮುರಿಯದ 4ನೇ ವಿಕೆಟ್​ಗೆ 132 ರನ್​ ಪೇರಿಸಿ 2ನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ. ನಾಯಕ ಕೇನ್​ ವಿಲಿಯಮ್ಸನ್​ (13) ಹಾಗೂ ಅನುಭವಿ ಬ್ಯಾಟ್ಸ್​ಮನ್​ ರಾಸ್​ ಟೇಲರ್​ (14) ವಿಫಲರಾದರು.

ನ್ಯೂಜಿಲೆಂಡ್​: 86 ಓವರ್​ಗಳಲ್ಲಿ 3 ವಿಕೆಟ್​ಗೆ 246 (ಕಾನ್​ವೇ 136*, ಲಾಥಮ್​ 35, ನಿಕೋಲಸ್​ 48*, ಕೇನ್​ ವಿಲಿಯಮ್ಸನ್​ 13, ಟೇಲರ್​ 14, ರಾಬಿನ್​ಸನ್​ 50ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net