

ವಿಜಯವಾಣಿ ಸುದ್ದಿಜಾಲ ಕೋಟ
ಕೋಟ ವ್ಯಾಪ್ತಿಯ ಕಮರ್ಷಿಯಲ್ ವಾಹನಗಳಿಗೆ ಟೋಲ್ ವಿನಾಯಿತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಕೆಆರ್ ಕಂಪನಿ ವಿರುದ್ಧ ಹೋರಾಟದ ಸಲುವಾಗಿ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ಸೋಮವಾರ ತುರ್ತು ಸಭೆ ಆಯೋಜಿಸಿತು.
ಭಾರಿ ಸಂಖ್ಯೆಯಲ್ಲಿ ಸೇರಿದ್ದ ಸ್ಥಳೀಯರು, ವಾಹನ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ಖಾಸಗಿ ಕಂಪನಿಗಳ ಪರವಾಗಿ ಜಿಲ್ಲಾಧಿಕಾರಿ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿ ಹೆದ್ದಾರಿ ಜಾಗೃತಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿತು.
ಸಭೆಯಲ್ಲಿ ಮನೆಮನೆಗೆ ತೆರಳಿ ಟೋಲ್ ವಿರುದ್ಧ ಹೋರಾಟದ ಜಾಗೃತಿ ಮೂಡಿಸುವ ಕುರಿತು ನಿರ್ಧರಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ, ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ, ಪ್ರಮುಖರಾದ ಅಲ್ವಿನ್ ಅಂದ್ರಾದೆ, ಗಣೇಶ್ ಪೂಜಾರಿ, ಭೋಜ ಪೂಜಾರಿ, ದಿನೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಐರೋಡಿ ವಿಠ್ಠಲ್ ಪೂಜಾರಿ ನಿರೂಪಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ.30ರಂದು ಸಭೆ ನಡೆಯಲಿದ್ದು, ಹೋರಾಟ ಸಮಿತಿ ಪರವಾಗಿ ತೀರ್ಪು ದೊರೆಯದಿದ್ದರೆ ಡಿ.31ರಂದು ಕೋಟ ವ್ಯಾಪ್ತಿ ಬಂದ್ ಮಾಡಿ ಪ್ರತಿಭಟಿಸುವ ಕುರಿತು ಸಮಿತಿ ತಿರ್ಮಾನಿಸಿದೆ. ಪ್ರತಿಭಟನೆ ಜತೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸಮಿತಿ ವತಿಯಿಂದ ಸಂಪರ್ಕಿಸುವ ಕುರಿತು ನಿರ್ಧರಿಸಲಾಯಿತು.