

ವಾಷಿಂಗ್ಟನ್ ಡಿಸಿ: ಎಲಾನ್ ಮಸ್ಕ್(Elon Musk) ಆಗಾಗ್ಗೆ ಒಂದಲ್ಲ ಒಂದು ಕಾರಣಕ್ಕಾಗಿ ಮುನ್ನೆಲೆಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು ಆ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಆ ಫೋಟೋಗಳನ್ನು ಮಸ್ಕ್ ಅವರ ಮಕ್ಕಳನ್ನು ಕಾಣಬಹುದು. ಆದರೆ ಸದ್ಯ ಮಸ್ಕ್ ಅವರು 13ನೇ ಮಗುವಿನ ವಿಚಾರ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ.
ವಾಸ್ತವವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿ ಮತ್ತು ಬರಹಗಾರ್ತಿ ಆಶ್ಲೇ ಸೇಂಟ್ ಕ್ಲೇರ್ ಫೆಬ್ರವರಿ 15 ರಂದು ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆಶ್ಲೇ ಅವರು, ಐದು ತಿಂಗಳ ಹಿಂದೆ ಮಸ್ಕ್‌ನ ಮಗುವಿಗೆ ಜನ್ಮ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್‌ನ ಸಿಇಒ ಎಲಾನ್ ಮಸ್ಕ್ ಅವರಿಂದ ಈ ಬಗ್ಗೆ ಇನ್ನೂ ಯಾವುದೇ ದೃಢೀಕರಣ ಬಂದಿಲ್ಲ. ಈ ಹೇಳಿಕೆ ನಿಜವೆಂದು ಸಾಬೀತಾದರೆ ಇದು ವಿಶ್ವದ ಅತ್ಯಂತ ಪ್ರಸಿದ್ಧ ಬಿಲಿಯನೇರ್‌ಗಳಲ್ಲಿ ಒಬ್ಬರಾದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ 13ನೇ ಮಗುವಾಗಿರುತ್ತದೆ.
ಆಶ್ಲೇ ಸೇಂಟ್ ಕ್ಲೇರ್ 'ಐದು ತಿಂಗಳ ಹಿಂದೆ, ನಾನು ಜಗತ್ತಿನಲ್ಲಿ ಹೊಸ ಮಗುವಿಗೆ ಜನ್ಮ ನೀಡಿದೆ ಮತ್ತು ಎಲಾನ್ ಮಸ್ಕ್ ಈ ಮಗುವಿನ ತಂದೆ' ಎಂದು ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ. ನಮ್ಮ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಗಾಗಿ ನಾನು ಇಲ್ಲಿಯವರೆಗೆ ಇದನ್ನು ಸಾರ್ವಜನಿಕಗೊಳಿಸಿರಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಇದು ಮಾಧ್ಯಮಗಳಲ್ಲಿ ಹೈಲೈಟ್ ಆಗುತ್ತಿದೆ. ನಮ್ಮ ಮಗು ಸಾಮಾನ್ಯ ಮತ್ತು ಸುರಕ್ಷಿತ ವಾತಾವರಣದಲ್ಲಿ ಬೆಳೆಯಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ ನಮ್ಮ ಮಗುವಿನ ವೈಯಕ್ತಿಕ ಜೀವನವನ್ನು ಗೌರವಿಸಿ ಮತ್ತು ಅನಗತ್ಯ ಹಸ್ತಕ್ಷೇಪವನ್ನು ತಪ್ಪಿಸುವಂತೆ ನಾನು ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ಎಕ್ಸ್(ಹಿಂದಿನ ಟ್ವಿಟರ್)ನಲ್ಲಿ ಒಬ್ಬ ಬಳಕೆದಾರರು ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಕ್ಲೇರ್ ಐದು ವರ್ಷಗಳಿಂದ ಮಸ್ಕ್ ಮಗುವನ್ನು ಹೊಂದಲು ಯೋಜಿಸುತ್ತಿದ್ದರು ಎಂಬುದನ್ನು ಸಾಬೀತುಪಡಿಸುತ್ತದೆ ಎಂದಿದೆ. ಇದಕ್ಕೆ ಎಲಾನ್ ಮಸ್ಕ್ ‘ವಾವ್’ ಎಂದು ಪ್ರತಿಕ್ರಿಯಿಸಿದ್ದಾರೆ.
ಆಶ್ಲೇ ಸೇಂಟ್ ಕ್ಲೇರ್ ಅವರು ತನ್ನ ‘ಎಲಿಫೆಂಟ್ಸ್ ಆರ್ ನಾಟ್ ಬರ್ಡ್ಸ್’ ಪುಸ್ತಕದಿಂದ ಹೆಚ್ಚು ಹೆಸರುವಾಸಿಯಾದ ಲೇಖಕಿ. ಈ ಪುಸ್ತಕವನ್ನು ಬ್ರೇವ್ ಬುಕ್ಸ್ ಪ್ರಕಟಿಸಿದೆ. ಜೂನ್ 2021ರಲ್ಲಿ ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಆಶ್ಲೇ ಸೇಂಟ್ ಕ್ಲೇರ್, ಈ ಪುಸ್ತಕವು ಟ್ರಾನ್ಸ್‌ಜೆಂಡರ್ ಸ್ವೀಕಾರ ಮತ್ತು ಟ್ರಾನ್ಸ್ ಐಡೆಂಟಿಟಿಗಳನ್ನು ಅಳವಡಿಸಿಕೊಳ್ಳುವ ಯುವಜನರ ಸಂಖ್ಯೆ ಹೆಚ್ಚುತ್ತಿರುವುದನ್ನು ಸ್ಪಷ್ಟವಾಗಿ ವಿರೋಧಿಸುತ್ತದೆ ಎಂದು ಹೇಳಿದರು.(ಏಜೆನ್ಸೀಸ್)