VIDEO: ಹಾಡಹಗಲೇ ನಡು ರಸ್ತೆಯಲ್ಲಿ ಆನೆಯಿಂದ ದರೋಡೆ! ವಿಡಿಯೋ ನೋಡಿದ್ರೆ ಶಾಕ್​ ಆಗ್ತೀರ

elephant
Published on

ಕೊಲಂಬೊ: ಸಾಮಾನ್ಯವಾಗಿ ನಕ್ಸಲ್​ ಪೀಡಿತ ಸ್ಥಳಗಳಲ್ಲಿ ಕಾರು, ಬಸ್ಸಿನಲ್ಲಿ ಹೋಗುವಾಗ 'ಯಾರಾದರೂ ಅಡ್ಡ ಹಾಕಿದರೆ ಗಾಡಿ ನಿಲ್ಲಿಸಬೇಡಿ' ಎಂದು ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿ ಕಳಿಸುತ್ತಾರೆ. ಆದರೆ ನಕ್ಸಲರ ಬದಲು ಆನೆಯೇ ಬಂದು ಅಡ್ಡ ಹಾಕಿ ಬಿಟ್ಟರೇ?

ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್​ ಒಂದಕ್ಕೆ ಆನೆಯೊಂದು ಅಡ್ಡ ಹಾಕಿರುವ ಘಟನೆ ಶ್ರೀಲಂಕಾದ ಕತಾರಗಮದಲ್ಲಿ ನಡೆದಿದೆ. ಹೀಗೆ ಅಡ್ಡ ಹಾಕಿದ ಆನೆ ಬಾಳೆಹಣ್ಣನ್ನು ದರೋಡೆ ಮಾಡಿಕೊಂಡು ಹೋಗಿರುವ ವಿಡಿಯೋ ಸಕತ್​ ವೈರಲ್​ ಅಗಿದೆ.

ಕತಾರಗಮದ ಹೆದ್ದಾರಿಯಲ್ಲಿ ಬಸ್​ ಒಂದು ತೆರಳುತ್ತಿತ್ತು. ಬಸ್ಸಿನಲ್ಲಿ ಸಾಕಷ್ಟು ತಿಂಡಿ ತಿನಿಸುಗಳನ್ನು ತುಂಬಿಸಿಕೊಂಡು ಹೋಗಲಾಗುತ್ತಿತ್ತು. ಆ ಸಮಯದಲ್ಲಿ ಹೆದ್ದಾರಿಗೆ ಬಂದ ಆನೆ ಬಸ್ಸನ್ನು ಅಡ್ಡ ಹಾಕಿದೆ. ಸೀದಾ ಡ್ರೈವರ್​ ಸೀಟಿನ ಬಳಿ ಬಂದು ಕಿಟಕಿಯಿಂದ ಸೊಂಡಿಲನ್ನು ಒಳಗೆ ಹಾಕಿದೆ. ಅಲ್ಲಿದ್ದ ಪ್ರಯಾಣಿಕರು ಬಾಳೆಹಣ್ಣಿನ ಕೊನೆಯನ್ನು ಕೊಡುವವರೆಗೂ ಆನೆ ಸೊಂಡಿಲನ್ನು ಹೊರಗೆ ತೆಗಿದಿಲ್ಲ.

ಈ ರೀತಿ ಆನೆ ಹಗಲು ದರೋಡೆ ಮಾಡಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿಗಳು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. 'ವನ್ಯ ಪ್ರಾಣಿಗಳಿಗೆ ಆಹಾರ ಕೊಡಬಾರದು ಎಂದು ಹೇಳುವುದು ಇದೇ ಕಾರಣಕ್ಕೆ. ಒಮ್ಮೆ ಆ ಅಭ್ಯಾಸ ಮಾಡಿಸಿಬಿಟ್ಟರೆ ಮುಂದೆ ಅವು ಮನುಷ್ಯರನ್ನು ಅಡ್ಡಗಟ್ಟಿ ಆಹಾರ ಕೇಳುತ್ತವೆ' ಎಂದು ಅನೇಕರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಇಷ್ಟಕ್ಕೆಲ್ಲ ಕಾರಣ ಮನುಷ್ಯನೇ, ಪ್ರಾಣಿಗಳ ಜಾಗವನ್ನು ನಾವು ಆವರಿಸಿರುವುದಕ್ಕೇ ಅವು ಈ ರೀತಿ ಮಾಡುತ್ತಿವೆ ಎಂದು ಅನೇಕರು ದೂರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net