

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಶಿರ್ವ ವ್ಯಾಪ್ತಿಯಲ್ಲಿ ಅತ್ಯಧಿಕ ಸಮಸ್ಯೆಗಳಿದ್ದು ಸೂಕ್ತ ಕ್ರಮಗಳೊಂದಿಗೆ ತುರ್ತಾಗಿ ಬಗೆಹರಿಸುವಂತೆ ಶಾಖಾಧಿಕಾರಿ ಮಂಜಪ್ಪ ಅವರಿಗೆ ಹಿರಿಯ ಅಧಿಕಾರಿ ದಿನೇಶ್ ಉಪಾಧ್ಯಾಯ ಸೂಚನೆ ನೀಡಿದರು.
ಕಾಪು ಮೆಸ್ಕಾಂ ಕಚೇರಿಯಲ್ಲಿ ಮಂಗಳವಾರ ನಡೆದ ಮೆಸ್ಕಾಂ ಕಾಪು ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಶಿರ್ವ ವ್ಯಾಪ್ತಿಯಲ್ಲಿನ ಸಮಸ್ಯೆ ಕುರಿತ ಗ್ರಾಹಕ ದೂರಿಗೆ ಅವರು ಉತ್ತರಿಸಿದರು.
ಶಿರ್ವ ವ್ಯಾಪ್ತಿಯಲ್ಲಿ ಲೈನ್‌ಮನ್‌ಗಳ ಕೊರತೆ, ಕೋಡು ಅಂಗನವಾಡಿ ಬಳಿ ವಿದ್ಯುತ್ ತಂತಿ ತುಂಡಾಗಿ ನಾಯಿ ಸತ್ತಿದೆ, ಮುಂದೆ ಮನುಷ್ಯರಿಗೂ ಈ ರೀತಿ ಆದರೆ ಏನು ಮಾಡುವುದು, ಪಾಂಬೂರು ಸಬ್‌ಸ್ಟೇಷನ್ ಬಳಿ 5 ಎಕರೆ ಕಾಗ ಇದ್ದರೂ ಗುತ್ತಿಗೆದಾರರು ಕಂಬಗಳನ್ನು ರಸ್ತೆ ಬದಿ ಹಾಕಿ, ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು.
ಮೆಸ್ಕಾಂ ಹೊಸ ಸಂಪರ್ಕ ಸೇರಿದಂತೆ ಪವರ್ ಸ್ಯಾಂಕ್ಷನ್ ಪಡೆಯಲು ಇಲಾಖೆ ನಗದು ಕಿಂಡಿಯ ಮೂಲಕ ನಗದು ಠೇವಣಿ ಮಾಡಿ, ರಶೀದಿ ಪಡೆದುಕೊಂಡರೂ ವಿದ್ಯುತ್ ಜೋಡಣೆ ಪಡೆಯಲು ಮತ್ತೆ ಲೆಕ್ಕಾಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಇಲಾಖೆಯಲ್ಲಿ ಹಣ ಕಟ್ಟಿ ಪಡೆದುಕೊಳ್ಳುವ ರಶೀದಿಗೆ ಬೆಲೆಯಿಲ್ಲದಂತಾಗುತ್ತದೆ. ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಮೆಸ್ಕಾಂ ಇಷ್ಟೊಂದು ನಿರ್ಲಕ್ಷೃ ವಹಿಸಿರುವುದು ಸರಿಯೇ ಎಂದು ಗುತ್ತಿಗೆದಾರ ನಾಗರಾಜ ಭಟ್ ಪ್ರಶ್ನಿಸಿದರು.
ಗುತ್ತಿಗೆದಾರರಾದ ರವೀಂದ್ರ ಪೂಜಾರಿ, ವಿಜಯ್ ಮಾಬಿಯಾನ್, ದಿನೇಶ್ ಮೂಳೂರು, ಗಿರಿಧರ್ ಶೆಟ್ಟಿಗಾರ್, ಮುಶ್ತಾಕ್ ಸಾಹೇಬ್, ವಸಂತ ಪೂಜಾರಿ, ಮುಹಮ್ಮದ್ ಮೊದಲಾದವರು ಇಲಾಖೆ ನಿಯಮಾವಳಿಗಳಿಂದ ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆ, ಗ್ರಾಹಕರಿಗೆ ಆಗುತ್ತಿರುವ ಅನನುಕೂಲತೆಗಳ ಸಹಿತವಾಗಿ ವಿವಿಧ ಸಮಸ್ಯೆ ಬಗ್ಗೆ ವಿವರಿಸಿದರು.
ಉಡುಪಿ ವಿಭಾಗೀಯ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಸನ್ನ ಕುಮಾರ್, ಕಾಪು ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅರವಿಂದ ಕೆ.ಎಸ್., ಸಹಾಯಕ ಇಂಜಿನಿಯರ್‌ಗಳಾದ ಆನಂದ ಎಸ್., ಅಜಯ್, ಕಿರಿಯ ಇಂಜಿನಿಯರ್‌ಗಳಾದ ಮಕ್ತುಮ್ ಹುಸೇನ್, ರಾಜೇಶ್ ನಾಯಕ್, ಶಾಖಾಧಿಕಾರಿಗಳಾದ ಪ್ರೀತಮ್ ನಾಯ್ಕ, ಮಂಜಪ್ಪ ಅಗಸಿಮುಂದಲ್, ಸಹಾಯಕ ಲೆಕ್ಕಾಧಿಕಾರಿ ಅನಂತಕೃಷ್ಣ ಭಟ್, ಹಿರಿಯ ಸಹಾಯಕಿ ಚಂದ್ರಿಕಾ ದೀಕ್ಷಿತ್ ಉಪಸ್ಥಿತರಿದ್ದರು.