

ಕುಂದಾಪುರ: ವಂದೇ ಭಾರತ್ ಸ್ಲೀಪರ್ ರೈಲು ಬಂದಾಗ ಅದನ್ನು ಮಂಗಳೂರು ಮುಂಬೈ ನಡುವೆ ಆದ್ಯತೆ ಮೇರೆಗೆ ಓಡಿಸಬೇಕು, ಮಡಗಾಂವ್ ಮಂಗಳೂರು ವಂದೇ ಭಾರತ್ ರದ್ದು ಮಾಡಬಾರದು ಮತ್ತು ಅದನ್ನು ಮುಂಬೈಗೆ ವಿಸ್ತರಣೆ ಮಾಡಬೇಕು ಎಂಬ ಮನವಿ ಜತೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸಲ್ಲಿಸಿದ ವಿಸ್ತೃತ ಮಂಗಳೂರು ಉಡುಪಿ ಭಾಗದ ಆರ್ಥಿಕ ಸಾಮಾಜಿಕ ಹಾಗೂ ಸಾರಿಗೆ ಸಂಪರ್ಕ ಅಧ್ಯಯನ ವರದಿ ಗಮನಿಸಿದ ಕೇಂದ್ರ ರೈಲ್ವೆ ಸಚಿವರು, ಸಂಸದರು ಸಲ್ಲಿಸಿದ ಮಾಹಿತಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮಡಗಾಂವ್ ವಂದೇ ಭಾರತ್ ರದ್ದಾಗಬಹುದು ಎಂಬ ಅಧಿಕಾರಿ ವಲಯದ ಅನುಮಾನದ ಹಿನ್ನೆಲೆ ಸಂಸದರು ಬೇಡಿಕೆ ಸಲ್ಲಿಸಿದ್ದರು. ಮಡಗಾಂವ್ ಮುಂಬೈ ವಂದೇ ಭಾರತ್ ರೈಲಿನ ಮಂಗಳೂರು ವಿಸ್ತರಣೆಗೆ ಮಹಾರಾಷ್ಟ್ರ ಕರಾವಳಿ ರೈಲು ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದು, ರೈಲು ಮಂಡಳಿಯಲ್ಲಿ ಚರ್ಚೆ ನಡೆದಿದೆ.
ಕರಾವಳಿ ಮತ್ತು ಮುಂಬೈ ನಗರಗಳ ನಡುವೆ ಪ್ರಿಮಿಯಮ್ ರೈಲು ಬೇಕು ಎಂಬ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಬೇಡಿಕೆಯನ್ನು ರೈಲ್ವೆ ಸಚಿವರ ಮುಂದಿಟ್ಟ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಮಿತಿಯ ಗಣೇಶ್ ಪುತ್ರನ್ ಕೃತಜ್ಞತೆ ಸಲ್ಲಿಸಿದ್ದಾರೆ.