

Election Commission: ದೆಹಲಿಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಕ್ತಾರ ಪವನ್ ಖೇರಾ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಿಸಿದ ಬಳಿಕ ಚುನಾವಣಾ ಆಯೋಗವು ನೋಟಿಸ್ ನೀಡಿದ್ದು, ಸೆಪ್ಟೆಂಬರ್ 8 ರಂದು ಬೆಳಿಗ್ಗೆ 11 ಗಂಟೆಯೊಳಗೆ ಪೂರಕ ದಾಖಲೆಗಳೊಂದಿಗೆ ವಿವರಣೆಯನ್ನು ಸಲ್ಲಿಸುವಂತೆ ಖೇರಾ ಅವರಿಗೆ ನಿರ್ದೇಶನ ನೀಡಲಾಗಿದೆ.
ನವದೆಹಲಿಯ ಜಿಲ್ಲಾ ಚುನಾವಣಾ ಕಚೇರಿ (DEO) ಪ್ರಕಾರ, ಜಂಗ್‌ಪುರ ಮತ್ತು ನವದೆಹಲಿ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಖೇರಾ ಅವರ ಹೆಸರು ಕಾಣಿಸಿಕೊಂಡಿದೆ.
1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 17 ಮತ್ತು ಸೆಕ್ಷನ್ 18 ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದನ್ನು ಈ ಖಾಯ್ದೆ ನಿಷೇಧಿಸುತ್ತದೆ. 1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧ ಎಂದು ನಿಮಗೆ ತಿಳಿದಿರಬಹುದು. ಆದ್ದರಿಂದ ಈ ಕಾಯ್ದೆಯಡಿ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದೆ. ಈ ರೀತಿಯ ವಿಷಯದಲ್ಲಿ ದೂರು ದಾಖಲಾದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ಅಥವಾ ಎರಡನ್ನೂ ವಿಧಿಸಬಹುದು. ಖೇರಾ ತಮ್ಮ ಉತ್ತರ ನೀಡಿದ ನಂತರ, ಇಲ್ಲವೇ ನೀಡಿದ ಗಡುವಿನೊಳಗೆ ಪ್ರತಿಕ್ರಿಯಿಸಲು ವಿಫಲವಾದರೆ ಕಾನೂನಿನ ಪ್ರಕಾರ ಮುಂದುವರಿಯುವುದಾಗಿ ಚುನಾವಣಾ ಆಯೋಗ ಹೇಳಿದೆ.
ನೋಟಿಸ್ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪವನ್ ಖೇರಾ, ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಹೆಸರು ಕಾಣಿಸಿಕೊಳ್ಳಲು ಚುನಾವಣಾ ಆಯೋಗವೇ ನೇರ ಹೊಣೆ ಎಂದಿದ್ದಾರೆ. 2016 ರಲ್ಲಿಯೇ ನವದೆಹಲಿ ಕ್ಷೇತ್ರದಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದು, ಅಲ್ಲಿನ ತಮ್ಮ ಹೆಸರನ್ನು ತೆಗೆದುಹಾಕಲು ಏನು ಮಾಡಬೇಕು ಅದನ್ನು ಮಾಡಿದ್ದೇನೆ ಎಂದರು. ಕಾಂಗ್ರೆಸ್ ಪಕ್ಷ ಹೇಳುತ್ತಿರುವುದು ಇದನ್ನೇ. ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ನಾವು ಎತ್ತುತ್ತಿರುವ ಪ್ರಶ್ನೆ ಇವೆ. ಈ ಪಟ್ಟಿ ಬಿಜೆಪಿ ನಾಯಕರಿಗೆ ಮತ್ತು ಚುನಾವಣಾ ಆಯೋಗಕ್ಕೂ ಲಭ್ಯವಿದೆ. ಆದರೆ, ಕಾಂಗ್ರೆಸ್ ಪಕ್ಷ ಪಟ್ಟಿಯನ್ನು ಕೇಳುತ್ತಲೇ ಇರುತ್ತದೆ, ಅದನ್ನು ಅವರು ನೀಡುತ್ತಿಲ್ಲ ಎಂದು ಆರೋಪಿಸಿದರು.(ಏಜೆನ್ಸೀಸ್)