

ಈಕ್ವೇಡಾರ್: ಖಾಸಗಿ ಆಸ್ಪತ್ರೆಯಲ್ಲಿ ಮೃತ ಎಂದು ಘೋಷಿಸಿದ ಐದು ಗಂಟೆಗಳ ಬಳಿಕ ವೃದ್ಧೆಯೊಬ್ಬಳು ಜೀವಂತವಾಗಿರುವ ಘಟನೆ ಈಕ್ವೇಡಾರ್ನಲ್ಲಿ ನಡೆದಿದೆ.
ವೃದ್ಧೆಯನ್ನು ಬೆಲ್ಲಾ ಮೊಂಟಾಯಾ(76) ಎಂದು ಗುರುತಿಸಲಾಗಿದ್ದು, ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೆಲ್ಲಾಳನ್ನು ತೀವ್ರ ಅನಾರೋಗ್ಯ ಹಾಗೂ ಪಾರ್ಶ್ವವಾಯುವಿನಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಆಸ್ಪತ್ರೆ ಸಿಬ್ಬಂದಿಯು ಆಕೆ ಮೃತಳಾಗಿದ್ದಾಳೆ ಎಂದು ಮರಣಪ್ರಮಾಣ ಪತ್ರವನ್ನು ಸಹ ನೀಡಿತ್ತು.
ಇದನ್ನೂ ಓದಿ: ಲಿಂಗಾಯತ ಸಿಎಂಗಳ ಬಗೆಗಿನ ಹೇಳಿಕೆ; ಸಿದ್ದರಾಮಯ್ಯ ವಿರುದ್ಧದ ದೂರು ವಜಾ
ಆಕೆಯ ಮಗ ಗಿಲ್ಬರ್ಟೊ ಬಾರ್ಬೆರಾ ಸೇರಿದಂತೆ ಮೊಂಟೊಯಾ ಕುಟುಂಬದವರು ಆಕೆಯನ್ನು ಶವಪೆಟ್ಟಿಗೆಯಲ್ಲಿರಿಸಿ ರುದ್ರಭೂಮಿಗೆ ಕರೆದೊಯ್ದು ಬಂಧುಗಳಿಗಾಗಿ ಕಾಯುತ್ತಿದ್ದರು. ಈ ವೇಳೆ ಐದು ಗಂಟೆಗಳ ನಂತರ, ಶವಪೆಟ್ಟಿಗೆಯಿಂದ ಸದ್ದು ಬರಲಾರಂಭಿಸಿದೆ. ಕೂಡಲೇ ಅಲ್ಲಿದ್ದವರು ಶವಪೆಟ್ಟಿಗೆಯನ್ನು ತೆರೆದು ನೋಡಿದಾಗ ಬೆಲ್ಲಾ ನಿಧಾನವಾಗಿ ಕೈಯಿಂದ ಪೆಟ್ಟಿಗೆಗೆ ಹೊಡೆಯುತ್ತಿರುವುದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
ಸಂಬಂಧಿಕರು ಬೆಲ್ಲಾಳನ್ನು ಶವಪೆಟ್ಟಿಗೆಯಿಂದ ಹೊರತೆಗೆದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದು, ಅವಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಸರ್ಕಾರ ಈ ಘಟನೆಯ ತನಿಖೆಗಾಗಿ ಸಮಿತಿಯನ್ನು ಸ್ಥಾಪಿಸಿದ್ದು, ಬೆಲ್ಲಾಳ ಆರೈಕೆಯ ಮೇಲ್ವಿಚಾರಣೆ ಮಾಡುತ್ತದೆ ಎಂದು ಸಚಿವಾಲಯ ಹೇಳಿದೆ.(ಏಜೆನ್ಸೀಸ್)