

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು ಒಂದು ವಾರ ಕಳೆದರೂ ಅಧಿಕಾರ ರಚನೆಯ ಸಂದಿಗ್ಧತೆ ಇನ್ನೂ ಮುಂದುವರಿದಿದೆ. ಈ ಮಧ್ಯೆ ಹಂಗಾಮಿ ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ( Eknath Shinde) ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಥಾಣೆಯಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ಮಂಗಳವಾರ(ಡಿಸೆಂಬರ್ 3) ತಿಳಿಸಿವೆ.
ಅವರ ಆರೋಗ್ಯವನ್ನು ಸಂಪೂರ್ಣ ತಪಾಸಣೆ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಕಳೆದೊಂದು ವಾರದಿಂದ ಶಿಂಧೆ ಗಂಟಲು ನೋವು ಹಾಗೂ ಜ್ವರದಿಂದ ಬಳಲುತ್ತಿದ್ದರು. ಅವರ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಶಿಂಧೆ ಅವರನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ಆರೋಗ್ಯದ ಕುರಿತು ಕೇಳಿದೆ ಪ್ರಶ್ನೆಗೆ ಏಕನಾಥ್ ಶಿಂಧೆ ಚೆನ್ನಾಗಿದೆ ಎಂದು ಹೇಳಿದ್ದಾರೆ.
ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಕಳೆದ ಶುಕ್ರವಾರ ಸತಾರಾ ಜಿಲ್ಲೆಯ ತನ್ನ ಸ್ವಗ್ರಾಮಕ್ಕೆ ತೆರಳಿದ್ದ ಶಿವಸೇನಾ ನಾಯಕ ಡಿಸೆಂಬರ್ 1 ರಂದು ಮುಂಬೈಗೆ ಮರಳಿದ್ದರು. ಬಿಜೆಪಿಯ ಹಿರಿಯ ನಾಯಕ ಗಿರೀಶ್ ಮಹಾಜನ್, ಏಕನಾಥ್ ಶಿಂಧೆ ಅವರನ್ನು ಸೋಮವಾರ ಭೇಟಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆಗಳ ಕುರಿತು ಚರ್ಚಿಸಿದ್ದರು. ಮಹಾಯುತಿ ಮೈತ್ರಿಯ ನಾಯಕರ ನಡುವೆ ಯಾವುದೇ ಸಂಘರ್ಷಗಳಿಲ್ಲ. ಹಂಗಾಮಿ ಮುಖ್ಯಮಂತ್ರಿಗಳ ಸ್ಥಿತಿ ಸುಧಾರಿಸುತ್ತಿದೆ ಎಂದು ಮಹಾಜನ್ ಹೇಳಿದ್ದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಯಾವುದೇ ಅಸಮಾಧಾನವಿಲ್ಲ, ಒಂದು ಗಂಟೆ ಒಟ್ಟಿಗೆ ಕುಳಿತು ಮಾತುಕತೆ ನಡೆಸಿದೆವು. ಅವರು ಡಿಸೆಂಬರ್ 5ರ ಸಿದ್ಧತೆಗಳ ಬಗ್ಗೆ ಚರ್ಚಿಸಿದರು ಮತ್ತು ನಾನು ಕೆಲವು ಆಲೋಚನೆಗಳನ್ನು ಹಂಚಿಕೊಂಡಿದ್ದೇನೆ. ರಾಜ್ಯದ ಜನರಿಗಾಗಿ ನಾವು ಬಹಳಷ್ಟು ಕೆಲಸಗಳನ್ನು ಮಾಡಬೇಕಾಗಿದೆ ಮತ್ತು ನಾವು ಅವರಿಗಾಗಿ ಒಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದು ಗಿರೀಶ್ ಮಹಾಜನ್ ತಿಳಿಸಿದ್ದರು.
ಅಲ್ಲದೆ ಡಿಸೆಂಬರ್ 5 ರಂದು ನಡೆಯಲಿರುವ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಂಬೈನ ಆಜಾದ್ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.ಇನ್ನೂ ಔಪಚಾರಿಕ ಘೋಷಣೆ ಮಾಡಿಲ್ಲವಾದರೂ ಈ ಹುದ್ದೆಗೆ ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.(ಏಜೆನ್ಸೀಸ್)