

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು ಒಂದು ವಾರ ಕಳೆದರೂ ಅಧಿಕಾರ ರಚನೆಯ ಸಂದಿಗ್ಧತೆ ಇನ್ನೂ ಮುಂದುವರಿದಿದೆ. ಡಿಸೆಂಬರ್ 4ರಂದು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯ(Maharashtra Next CM) ಹೆಸರನ್ನು ಘೋಷಿಸಲಾಗುವುದು ಎಂದು ಬಿಜೆಪಿಯ ಹಿರಿಯ ಅಧಿಕಾರಿಯೊಬ್ಬರು ಸೋಮವಾರ (ಡಿಸೆಂಬರ್ 2) ತಿಳಿಸಿದ್ದಾರೆ.
ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಡಿಸೆಂಬರ್ 5ರಂದು ನಡೆಯುತ್ತಿದ್ದು, ಅದಕ್ಕೂ ಮುನ್ನಾದಿನದಂದು ಅಂದರೆ ಡಿಸೆಂಬರ್ 4ರ ಸಂಜೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯ ಹೆಸರನ್ನು ಪ್ರಕಟಿಸಲಾಗುವುದು. ಚುನಾಯಿತ ಬಿಜೆಪಿ ಶಾಸಕರು ತಮ್ಮ ಪಕ್ಷದ ನಾಯಕರನ್ನು ಆಯ್ಕೆ ಮಾಡಿದ ತಕ್ಷಣ ಮುಖ್ಯಮಂತ್ರಿಯ ಹೆಸರನ್ನೂ ಘೋಷಿಸಲಾಗುವುದು ಎಂದು ಬಿಜೆಪಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಭಾರತೀಯ ಜನತಾ ಪಕ್ಷವು ಸೋಮವಾರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಮಹಾರಾಷ್ಟ್ರ ಶಾಸಕಾಂಗ ಪಕ್ಷದ ಸಭೆಗಳಲ್ಲಿ ಕೇಂದ್ರ ವೀಕ್ಷಕರನ್ನಾಗಿ ನೇಮಿಸಿದೆ. ಡಿಸೆಂಬರ್ 4 ರಂದು ಮುಂಬೈನಲ್ಲಿ ಬಿಜೆಪಿ ಶಾಸಕರೊಂದಿಗೆ ರೂಪಾನಿ ಮತ್ತು ಸೀತಾರಾಮನ್ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ಸಭೆಯಲ್ಲಿ ಆಯ್ಕೆಯಾದ ಅಭ್ಯರ್ಥಿಯ ಹೆಸರನ್ನು ದೆಹಲಿಯ ಹಿರಿಯ ನಾಯಕರಿಗೆ ಕಳುಹಿಸಲಾಗುವುದು. ಕೇಂದ್ರ ನಾಯಕತ್ವದ ಒಪ್ಪಿಗೆ ಪಡೆದ ನಂತರ ಈ ಇಬ್ಬರೂ ವೀಕ್ಷಕರು ಚುನಾಯಿತ ಅಭ್ಯರ್ಥಿ ಹೆಸರನ್ನು ಘೋಷಿಸುತ್ತಾರೆ. ಅವರು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಸೆಂಬರ್ 5 ರಂದು(ಗುರುವಾರ) ಮುಂಬೈನ ಆಜಾದ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಮಹಾಯುತಿ ಸರ್ಕಾರದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಳೆ ಈಗಾಗಲೇ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಜತೆಗೆ ಇತರ ಕೇಂದ್ರ ನಾಯಕರು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಇನ್ನೂ ಔಪಚಾರಿಕ ಘೋಷಣೆ ಮಾಡಿಲ್ಲವಾದರೂ ಈ ಹುದ್ದೆಗೆ ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮಹಾಮೈತ್ರಿಕೂಟದಲ್ಲಿ ಬಿಜೆಪಿಯ ಎರಡು ಪ್ರಮುಖ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಪಾತ್ರವನ್ನು ಪಡೆಯುವ ನಿರೀಕ್ಷೆಯಿದೆ. ಸದ್ಯ ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಏಕನಾಥ್ ಶಿಂಧೆ, ಸಂಘಟನೆಯ ನಾಯಕತ್ವಕ್ಕೆ ನನ್ನ ಬೇಷರತ್ ಬೆಂಬಲವಿದೆ. ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದನ್ನು ಗೌರವಿಸುತ್ತೇವೆ ಎಂದು ಈಗಾಗಲೇ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ 288 ವಿಧಾನಸಭಾ ಸ್ಥಾನಗಳ ಪೈಕಿ 235 ಸ್ಥಾನಗಳನ್ನು ಗೆದ್ದಿದ್ದಾರೆ. ಅದರಲ್ಲಿ ಬಿಜೆಪಿ 132 ಸ್ಥಾನಗಳನ್ನು ಪಡೆದರೆ, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಪಡೆದುಕೊಂಡಿದೆ. ರಾಜ್ಯ ಸಚಿವ ಸಂಪುಟದಲ್ಲಿ ಗರಿಷ್ಠ 43 ಸದಸ್ಯರಿದ್ದಾರೆ. ಈ ಪೈಕಿ ಬಿಜೆಪಿ 21 ಸಚಿವ ಸ್ಥಾನಗಳನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಶಿವಸೇನೆಗೆ 12 ಮತ್ತು ಎನ್‌ಸಿಪಿಗೆ 10 ಮಂತ್ರಿಗಳು ಸಿಗಬಹುದು. ಹಿಂದಿನ ಸರ್ಕಾರದಲ್ಲಿ ಬಿಜೆಪಿ 10 ಇಲಾಖೆಗಳನ್ನು ಹೊಂದಿದ್ದರೆ, ಶಿವಸೇನೆ ಮತ್ತು ಎನ್‌ಸಿಪಿ ತಲಾ 9 ಇಲಾಖೆಗಳನ್ನು ಹೊಂದಿದ್ದವು. ಆಗ 15 ಸಚಿವ ಸ್ಥಾನಗಳು ಖಾಲಿ ಇದ್ದವು. ಸುಮಾರು ಒಂದೂಕಾಲು ವರ್ಷಗಳಿಂದ ಈ ಸಚಿವ ಸ್ಥಾನಗಳು ಭರ್ತಿಯಾಗಿಲ್ಲ.(ಏಜೆನ್ಸೀಸ್)