ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬಾಂಡ್ ಯೋಜನೆ

school
ಶತಮಾನ ಪೂರೈಸಿರುವ ಪಡುಬಿದ್ರಿ ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲೆ
Published on

ಹೇಮನಾಥ್ ಪಡುಬಿದ್ರಿ

ಶತಮಾನ ಪೂರೈಸಿರುವ ಪಡುಬಿದ್ರಿ ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗಣಪತಿ ಪ್ರೌಢಶಾಲೆ ಉಳಿಸಿ ಬೆಳೆಸುವ ದೃಷ್ಟಿಯಿಂದ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿ ಹಾಗೂ 8ನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬಾಂಡ್ ನೀಡುವ ಹೊಸ ಯೋಜನೆಗೆ ಹಳೇ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ, ಶಾಲಾ ಹಳೇ ವಿದ್ಯಾರ್ಥಿ ಮುಂಬೈ ಉದ್ಯಮಿ ಪೃಥ್ವಿರಾಜ್ ಹೆಗ್ಡೆ ನಿರ್ಧರಿಸಿದ್ದಾರೆ.

ಅದಮಾರು ಮಠ ಶಿಕ್ಷಣ ಮಂಡಳಿ ಆಡಳಿತಕ್ಕೆ ಒಳಪಟ್ಟ, 104 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ, ಅತ್ಯುತ್ತಮ ಶೈಕ್ಷಣಿಕ ಗುಣಮಟ್ಟವುಳ್ಳ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಉಚಿತ ಸಮವಸ್ತ್ರ, ಪಠ್ಯಪುಸ್ತಕ ಮೊದಲಾದ ಸವಲತ್ತುಗಳನ್ನು ಈ ಮೊದಲೇ ಇಲ್ಲಿ ನೀಡಲಾಗುತ್ತಿದೆ. ಒಂದೊಮ್ಮೆ 900ರ ಹತ್ತಿರ ವಿದ್ಯಾರ್ಥಿಗಳನ್ನೊಂದಿದ್ದ ಈ ಕನ್ನಡ ಮಾಧ್ಯಮ ಶಾಲೆಯಲ್ಲಿ ಕ್ರಮೇಣ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕುಂಠಿತಗೊಳ್ಳಲಾರಂಭಿಸಿತು. ಪ್ರಸ್ತುತ ಒಂದನೇ ತರಗತಿಯಲ್ಲಿ 5 ಹಾಗೂ ಎಂಟನೇ ತರಗತಿಯಲ್ಲಿ 13 ಸೇರಿ ಸಂಸ್ಥೆಯಲ್ಲಿ ಒಟ್ಟು 130 ವಿದ್ಯಾರ್ಥಿಗಳಷ್ಟೇ ಇದ್ದಾರೆ. ಪ್ರಾಥಮಿಕ ಹಾಗೂ ಪ್ರೌಢವಿಭಾಗದಲ್ಲಿ 15 ಶಿಕ್ಷಕರಿದ್ದು, ಅದರಲ್ಲಿ 10 ಶಿಕ್ಷಕರಿಗೆ ಆಡಳಿತ ಮಂಡಳಿಯೇ ವೇತನ ಪಾವತಿಸುತ್ತಿದೆ.

ಅಂಚೆ ಇಲಾಖೆಯಲ್ಲಿ ಠೇವಣಿ

2024 -2025ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗಣಪತಿ ಪ್ರೌಢಶಾಲೆ ಒಂದನೇ ಮತ್ತು ಎಂಟನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬಾಂಡ್ ನೀಡಿ ಮಕ್ಕಳ ದಾಖಲಾತಿ ಹೆಚ್ಚಿಸುವ ಪ್ರಯತ್ನದ ಜತೆಗೆ ಕನ್ನಡ ಮಾಧ್ಯಮ ಶಾಲೆ ಉಳಿಸಲು ಮುಂದಾಗಿದೆ. ಇದರಂತೆ 1ನೇ ತರಗತಿಗೆ ಸೇರ್ಪಡೆಗೊಳ್ಳುವ ಪುಟಾಣಿಗಳ ಹೆಸರಲ್ಲೇ 3000 ರೂ. ಮತ್ತು 8ನೇ ತರಗತಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ 2000 ರೂ.ಗಳ ಅಂಚೆ ಇಲಾಖೆಯಲ್ಲಿ ಠೇವಣಿಯಿಟ್ಟು ಶೈಕ್ಷಣಿಕ ಬಾಂಡ್ ನೀಡಲಾಗುತ್ತದೆ. ವಿದ್ಯಾರ್ಥಿಗಳ ಶಾಲಾ ವಿದ್ಯಾಭ್ಯಾಸ ಪೂರ್ಣವಾದ ಬಳಿಕ ಅದಲ್ಲಿನ ಮೊತ್ತ ಅವರಿಗೆ ದೊರೆಯಲಿದೆ.

ಉಚಿತ ಇಂಗ್ಲಿಷ್ ಸ್ಪೀಕಿಂಗ್ ತರಗತಿ

ಶಿಕ್ಷಣ ಇಲಾಖೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಅವಕಾಶ ನೀಡುತ್ತಿದ್ದರೂ ಅನುದಾನಿತ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಅವಕಾಶ ನೀಡುತ್ತಿಲ್ಲ. ಅದಕ್ಕೆ ಪರ್ಯಾಯವಾಗಿ ಇಲ್ಲಿ ಪ್ರಾಥಮಿಕ ಶಾಲೆಯ ಒಂದರಿಂದ ಏಳನೇ ತರಗತಿ ಎಲ್ಲ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಸ್ಪೀಕಿಂಗ್ ತರಗತಿಯನ್ನು ಪರಿಣಿತ ಶಿಕ್ಷಕರು ನಡೆಸಲಿದ್ದು, ಅದಕ್ಕೆ ಅವಶ್ಯಕವಿರುವ 350ರೂ. ಮೌಲ್ಯದ ಸ್ಪೀಕಿಂಗ್ ಕೋರ್ಸ್ ಪುಸ್ತಕವನ್ನೂ ಉಚಿತವಾಗಿ ನೀಡಲಾಗುತ್ತಿದೆ.

ಈಗ ರೂಪಿಸಲಾಗಿರುವ ಶೈಕ್ಷಣಿಕ ಬಾಂಡ್ ಯೋಜನೆಯ ಮೂಲಕ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನದತ್ತ, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವತ್ತ ಶಿಕ್ಷಣಪ್ರೇಮಿ ಪೃಥ್ವಿರಾಜ್ ಹೆಗ್ಡೆ ದಿಟ್ಟ ಹೆಜ್ಜೆಯನ್ನು ಇರಿಸಿದ್ದಾರೆ.-ಅನಂತಪಟ್ಟಾಭಿರಾವ್ ಹಳೇ ವಿದ್ಯಾರ್ಥಿ ಸಂಘದ ಮಾರ್ಗದರ್ಶಕ

ಎಲ್ಲ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಅನುಮತಿ ನೀಡಿದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಳವಾಗುವ ಆಶಾಭಾವನೆಯಿದೆ.-ರಾಘವೇಂದ್ರ ರಾವ್, ಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net