

ಬೆಂಗಳೂರು: ರಾಜ್ಯದಲ್ಲಿ ಶಾಲೆ- ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದರೂ ಪರೀಕ್ಷೆ ಮುಂದೂಲ್ಪಟ್ಟವರಿಗೆ ಯಾವಾಗ ಪರೀಕ್ಷೆ ನಡೆಯುತ್ತೋ ಅನ್ನೋ ಗೊಂದಲ ಕಾಡುತ್ತಲೇ ಇತ್ತು. ಅಂಥವರಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ಕುಮಾರ್ ಕೆಲ ಮಾಹಿತಿಗಳನ್ನು ನೀಡಿದ್ದಾರೆ ಹಾಗೂ ಪರೀಕ್ಷೆಗಳ ಬಗ್ಗೆ ಇದ್ದ ಗೊಂದಲಗಳನ್ನು ನಿವಾರಿಸಿದ್ದಾರೆ. ಅದರಂತೆ, ಏಳನೇ ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಈ ವಿದ್ಯಾರ್ಥಿಗಳನ್ನು ಯಾವುದೇ ಷರತ್ತುಗಳಿಲ್ಲದೇ ಮುಂದಿನ ತರಗತಿಗಳಿಗೆ ಬಡ್ತಿ ನೀಡಬೇಕೆಂದು ಆದೇಶ ಹೊರಡಿಸಿದ್ದಾರೆ.
9ನೇ ತರಗತಿ ವಿದ್ಯಾರ್ಥಿಗಳು: ಪ್ರಸ್ತುತ 9ನೇ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ಫಾರ್ಮೇಟಿವ್ ಹಾಗೂ ಸಮ್ಮೇಟಿವ್ ಅಸೆಸ್ಮೆಂಟ್ ಹೆಸರಿನಲ್ಲಿ ಅಂದರೆ ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅವರನ್ನು ಉತ್ತೀರ್ಣ ಅಥವಾ ಅನುತ್ತೀರ್ಣ ಮಾಡಲಾಗುತ್ತದೆ. ಒಂದು ವೇಳೆ ವಿದ್ಯಾರ್ಥಿಗಳ ಕಲಿಕಾ ಮಟ್ಟ ಉತ್ತಮವಾಗಿಲ್ಲದಿದ್ದರೆ, ಈ ರಜಾ ಅವಧಿಯಲ್ಲಿ ಅವರನ್ನು ಓದಿನಲ್ಲಿ ತೊಡಗಿಸಿ, ರಜೆ ಅವಧಿ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಿ ಆಮೂಲಕ ಅವರನ್ನು ಮುಂದಿನ ತರಗತಿಗೆ ಕಳುಹಿಸಬೇಕೋ ಅಥವಾ ಇಲ್ಲವೇ ಎಂಬುದನ್ನು ಕೈಗೊಳ್ಳುವ ನಿರ್ಧಾರವನ್ನು ಆಯಾ ಶಾಲೆಗಳಿಗೆ ನೀಡಲಾಗಿದೆ ಎಂದು ಸುರೇಶ್ಕುಮಾರ್ ತಿಳಿಸಿದ್ದಾರೆ.
ಏಪ್ರಿಲ್ 14ರ ಬಳಿಕ ಎಸ್ಎಸ್ಎಲ್ಸಿ ವೇಳಾಪಟ್ಟಿ: ಮುಖ್ಯವಾಗಿ ಎಸ್ಎಸ್ಎಲ್ ಪರೀಕ್ಷೆ ಯಾವಾಗ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೂ ಸ್ಪಷ್ಟನೆ ನೀಡಿರುವ ಸಚಿವರು ಏಪ್ರಿಲ್ 14ರ ಬಳಿಕ ಲಾಕ್ಡೌನ್ ಪರಿಸ್ಥಿತಿಯನ್ನು ಆಧರಿಸಿ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಹಿತ ಕಾಪಾಡಲಾಗುವುದು. ಅಗತ್ಯ ಕಾಲಾವಕಾಶವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಅದರಂತೆ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಪರೀಕ್ಷೆ ಕೂಡ ನಡೆಸಬೇಕಾಗಿದೆ. ಈ ಬಗ್ಗೆಯೂ ಏಪ್ರಿಲ್ 14ರ ನಂತರ ತಿಳಿಸಲಾಗುವುದು ಎಂದು ಹೇಳಿದ್ದಾರೆ.