ಕೆನಡಾದ ನೆಲದಿಂದ ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಖಲಿಸ್ತಾನ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಮತ್ತೊಮ್ಮೆ ತನ್ನ ಬಾಲ ಬಿಚ್ಚಿದ್ದಾನೆ. ಕೆನಡಾದಲ್ಲಿ ಸಂಸದರಾಗಿರುವ ಕನ್ನಡಿಗ ಚಂದ್ರ ಆರ್ಯ ಸೇರಿದಂತೆ ಹಿಂದುಗಳಿಗೆ ಕೆನಡಾ ತೊರೆದು ಭಾರತಕ್ಕೆ ಹೋಗುವಂತೆ ಬೆದರಿಕೆ ಹಾಕಿದ್ದಾನೆ. ‘‘ಆರ್ಯ ಮತ್ತು ಅವರ ಬೆಂಬಲಿಗರೇ. ನಿಮಗೆ ಕೆನಡಾದಲ್ಲಿ ಜಾಗವಿಲ್ಲ, ಏಕೆಂದರೆ ನೀವು, ಭಾರತದ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದೀರಿ, ನೀವೆಲ್ಲರೂ ಇಲ್ಲಿನ ಪೌರತ್ವವನ್ನು ತ್ಯಜಿಸಿ ನಿಮ್ಮ ಮಾತೃಭೂಮಿಯಾದ ಭಾರತಕ್ಕೆ ಹಿಂದಿರುಗಿ’ ಎಂದು ವಿಡಿಯೋ ಸಂದೇಶದಲ್ಲಿ ಬೆದರಿಕೆ ಒಡ್ಡಿದ್ದಾನೆ. ಅಷ್ಟಕ್ಕೂ ಚಂದ್ರ ಆರ್ಯ ಮಾಡಿದ ತಪ್ಪೇನು ಗೊತ್ತೆ? ಭಾರತದ ಪರವಾಗಿ ನಿಲುವು ಮಂಡಿಸಿದ್ದು. ಗುರುಪತ್ವಂತ್ ಸಿಂಗ್ ಪನ್ನೂನ್ ಮತ್ತು ಇತರ ಪ್ರತ್ಯೇಕತಾವಾದಿಗಳು ವಿದೇಶಿ ನೆಲದಲ್ಲಿ ಕುಳಿತು ಭಾರತದ ವಿರುದ್ಧ ಸಂಚು ಮಾಡುತ್ತಿರುವುದು ಹೊಸ ವಿಷಯವೇನಲ್ಲ.
ಈ ಬೆದರಿಕೆಯ ತಂತ್ರಕ್ಕೆ ಚಂದ್ರ ಆರ್ಯ ಕೂಡ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಸೂಕ್ತ ತಿರುಗೇಟನ್ನೇ ನೀಡಿದ್ದಾರೆ. ‘ನಾವು ಹಿಂದುಗಳು. ನಮ್ಮ ಅದ್ಭುತ ದೇಶವಾದ ಕೆನಡಾಕ್ಕೆ ಪ್ರಪಂಚದ ಎಲ್ಲ ಭಾಗಗಳಿಂದ ಬಂದಿದ್ದೇವೆ. ಇದು ನಮ್ಮ ಭೂಮಿ. ಕೆನಡಾದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ನಾವು (ಹಿಂದುಗಳು) ಕೊಡುಗೆ ನೀಡಿದ್ದು, ಅದನ್ನು ಮುಂದುವರಿಸಲಿದ್ದೇವೆ’ ಎಂದು ತಿಳಿಸಿದ್ದಾರೆ. ಕೆನಡಾದ ಎಡ್ಮಂಟನ್ ನಗರದಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ಸೋಮವಾರ ದುಷ್ಕರ್ವಿುಗಳು ಹಾನಿಗೊಳಿಸಿ, ಗೋಡೆಗಳ ಮೇಲೆ ದ್ವೇಷಪೂರಿತ ಮತ್ತು ಭಾರತವಿರೋಧಿ ಬರಹಗಳನ್ನು ಬರೆದ ಕಹಿ ಘಟನೆಯ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದ್ದು, ಗಂಭೀರವಾಗಿ ಪರಿಗಣಿಸಬೇಕಿದೆ.
ಭಾರತ ಸರ್ಕಾರವು ಪನ್ನೂನ್ನಂತಹ ಉಗ್ರಗಾಮಿಗಳ ಹುಟ್ಟಡಗಿಸಲು ಸಾಧ್ಯವಿರುವ ಎಲ್ಲ ರೀತಿಯ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಳ್ಳಬೇಕು. ಅಗತ್ಯವಿದ್ದರೆ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯಬೇಕು. ಇಲ್ಲದಿದ್ದಲ್ಲಿ ಇಂಥ ಪ್ರತ್ಯೇಕತಾವಾದಿಗಳು ದ್ವೇಷವನ್ನೇ ಹರಡಿ ಸೌಹಾರ್ದ, ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಾರೆ. ಖಲಿಸ್ತಾನ ಪ್ರತ್ಯೇಕತಾವಾದಿಗಳು ಪದೇಪದೆ ಬೆದರಿಕೆಯೊಡ್ಡುತ್ತಿದ್ದು, ಇವರಿಗೆ ಸಿಗುತ್ತಿರುವ ಬೆಂಬಲ ಮತ್ತು ಆರ್ಥಿಕ ಮೂಲಗಳಿಗೆ ಕತ್ತರಿ ಹಾಕಬೇಕು. ಇಂಥ ಸೂಕ್ಷ್ಮ ಮತ್ತು ಗಂಭೀರ ವಿಷಯಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಏರ್ಪಡುವುದು ಕೂಡ ಅಗತ್ಯವಾಗಿದೆ. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ವಿಳಂಬ ಮಾಡುವಂತಿಲ್ಲ.
Paris Olympics: ಒಲಿಂಪಿಕ್ಸ್ ಕ್ರೀಡಾಕೂಟ ವೀಕ್ಷಣೆಗೆ ಬಂದಿದ್ದ ಆಸ್ಟ್ರೇಲಿಯಾ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ