ಸಿನಿಮಾ

ಸಂಪಾದಕೀಯ | ಅರ್ಹರಿಗಷ್ಟೆ ಸಿಗಲಿ; ಬಿಪಿಎಲ್ ಕಾರ್ಡಿಗೆ ಹೆಚ್ಚಿದ ಬೇಡಿಕೆ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಪಡೆದು ಸರ್ಕಾರವನ್ನೂ ರಚಿಸಿಯಾಗಿದೆ. ಈಗ ದೆಹಲಿಯಲ್ಲಿ ಸಂಪುಟ ವಿಸ್ತರಣೆ ಕಸರತ್ತು ನಡೆಯುತ್ತಿದ್ದು, ಒಂದೆರಡು ದಿನಗಳಲ್ಲಿ ಹೊಸ ಸಚಿವರ ಪಟ್ಟಿ ಪ್ರಕಟವಾಗುವ ಸಾಧ್ಯತೆ ಕಂಡುಬರುತ್ತಿದೆ.

ಈ ನಡುವೆ, ಸಿಎಂ, ಡಿಸಿಎಂ ಮತ್ತು ಎಂಟು ಸಚಿವರು ಪ್ರಮಾಣವಚನ ತೆಗೆದುಕೊಂಡ ಮೇ 20ರಂದೇ ಮೊದಲ ಸಚಿವ ಸಂಪುಟ ಸಭೆ ನಡೆಸಿ, ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ, ಐದು ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆಯನ್ನೂ ನೀಡಲಾಯಿತು. ಈ ಯೋಜನೆಗಳನ್ನು ಪಡೆಯಲು ಯಾರು ಅರ್ಹರು, ಅದಕ್ಕೆ ಮಾನದಂಡಗಳೇನು ಎಂಬಿತ್ಯಾದಿಯೆಲ್ಲ ಇನ್ನಷ್ಟೇ ನಿರ್ಧಾರವಾಗಬೇಕಿದ್ದು, ಫಲಾನುಭವಿಗಳಾಗಲು ಕೆಲವು ಷರತ್ತುಗಳಿರುತ್ತವೆ ಎಂಬುದಂತೂ ಬಹುತೇಕ ಖಚಿತ. ಸಾರ್ವಜನಿಕ ವಲಯದಲ್ಲಿ ಇದು ಈಗ ಬಹುರ್ಚಚಿತ ವಿಷಯ. ಬಿಪಿಎಲ್ ಕಾರ್ಡ್ ಇದ್ದವರು ಫಲಾನುಭವಿಗಳಾಗುವುದು ಹೆಚ್ಚುಕಡಿಮೆ ನಿಕ್ಕಿ ಎಂಬ ಭಾವನೆ ಹಿನ್ನೆಲೆಯಲ್ಲಿ, ಕಾರ್ಡಿಗೆ ಭರ್ಜರಿ ಬೇಡಿಕೆ ಕಂಡುಬಂದಿದೆ.

2023ರ ಜನವರಿಯಿಂದ ಮೇ 20ರವರೆಗೆ ರಾಜ್ಯದಲ್ಲಿ ಒಟ್ಟು ಸುಮಾರು 4.25 ಲಕ್ಷ ಜನರು ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಮೇ 14ರಿಂದ 20ರ ಅವಧಿಯಲ್ಲಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆಯೇ 78 ಸಾವಿರದಷ್ಟಿದೆ. ಪಡಿತರ ಕಾರ್ಡಿಗೆ ಇರುವ ಬೇಡಿಕೆಯನ್ನು ಇದು ಬಿಂಬಿಸುತ್ತದೆ. ದಾಖಲೆಗಳ ಸಮಸ್ಯೆ, ಸರ್ವರ್, ಚುನಾವಣಾ ನೀತಿಸಂಹಿತೆ ಇತ್ಯಾದಿ ಕಾರಣಗಳಿಂದ ಎರಡು ತಿಂಗಳಿಂದ ಕಾರ್ಡ್ ವಿತರಣೆ ಸ್ಥಗಿತವಾಗಿದೆ. ಇವುಗಳಲ್ಲಿ ತುರ್ತು ಆರೋಗ್ಯ ಚಿಕಿತ್ಸೆ ಅಗತ್ಯ ಇರುವಂಥವನ್ನು ಮಾತ್ರ ಗುರುತಿಸಿ ಸದ್ಯ ಕಾರ್ಡ್ ನೀಡಲಾಗುತ್ತಿದೆ. ಉಳಿದ ಕಾರ್ಡಗಳನ್ನು ಹೊಸ ಸರ್ಕಾರದ ಸೂಚನೆ ಬಂದ ನಂತರದಲ್ಲಿ ವಿತರಿಸುವ ಸಾಧ್ಯತೆ ಇದೆ.

ಬಿಪಿಎಲ್ ಕಾರ್ಡಗಳ ವಿಚಾರದಲ್ಲಿ ಮೊದಲಿಂದಲೂ ಒಂದು ಪ್ರವೃತ್ತಿ ಕಂಡುಬರುತ್ತಿದೆ. ಅದೆಂದರೆ- ಸರ್ಕಾರದ ನೀತಿನಿಯಮಾವಳಿಗಳನ್ನು ಮೀರಿ, ಅನರ್ಹರು ಸಹ ಬಿಪಿಎಲ್ ಕಾರ್ಡಗಳನ್ನು ಗಿಟ್ಟಿಸಿಕೊಂಡು, ವಿವಿಧ ಸವಲತ್ತುಗಳನ್ನು ಪಡೆಯುವುದು. ಈ ಕಾರಣಕ್ಕೆ ಹಿಂದೆ ಅನೇಕ ಬಾರಿ ಲಕ್ಷಾಂತರ ಸಂಖ್ಯೆಯ ಅನರ್ಹ ಕಾರ್ಡಗಳನ್ನು ರದ್ದುಪಡಿಸಲಾಗಿತ್ತು. ಸರ್ಕಾರಿ ನೌಕರರು ಸಹ ಕಾರ್ಡ ಪಡೆದ ಉದಾಹರಣೆಗಳಿದ್ದವು. 2023ರ ಜನವರಿ ವೇಳೆಗೆ ರಾಜ್ಯದಲ್ಲಿ ಬಿಪಿಎಲ್, ಅಂತ್ಯೋದಯ, ಎಪಿಎಲ್ ಸೇರಿ ಸುಮಾರು 5.28 ಕೋಟಿ ಜನರು ರೇಷನ್ ಕಾರ್ಡ್ ಫಲಾನುಭವಿಗಳಾಗಿದ್ದು, ಈ ಪೈಕಿ 4.50 ಲಕ್ಷದಷ್ಟು ಅನರ್ಹ ಕಾರ್ಡಗಳನ್ನು ರದ್ದುಪಡಿಸಲಾಗಿದೆ.

ಈ ಪರಿ ಕಾರ್ಡಗಳಿರುವುದನ್ನು ನೋಡಿದರೆ, ಸರ್ಕಾರದ ಅಭಿವೃದ್ಧಿ ಯೋಜನೆಗಳ ಪರಿಣಾಮ ಏನಾಯಿತು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆಳುವ ಪಕ್ಷ ಯಾವುದಿದ್ದರೂ ಸಾಮಾಜಿಕ ಕಲ್ಯಾಣ ಯೋಜನೆಗಳಿಗೇನು ಕೊರತೆ ಆಗುವುದಿಲ್ಲ; ಸಾವಿರಾರು ಕೋಟಿ ರೂ. ಮೊತ್ತದ ಯೋಜನೆಗಳೂ ಘೋಷಣೆಯಾಗುತ್ತಲೇ ಇರುತ್ತವೆ. ಹೀಗಾಗಿ ಸರ್ಕಾರದ ‘ಭಾಗ್ಯ’ಗಳು ಅನರ್ಹರತ್ತ ಹೋಗದೆ ಅರ್ಹರನ್ನು ಮಾತ್ರ ತಲುಪಿದರೆ ಉದ್ದೇಶ ಸಾರ್ಥಕವಾಗುತ್ತದೆ. ಹಾಗಿಲ್ಲವಾದಲ್ಲಿ, ಸರ್ಕಾರದ ಹಣವೂ ವೃಥಾ ಪೋಲು; ಯೋಜನೆಯ ಉದ್ದೇಶವೂ ಪೂರ್ತಿಯಾಗಿ ಈಡೇರುವುದಿಲ್ಲ. ಇಲ್ಲಿ ಸಾರ್ವಜನಿಕರ ಮನೋಭಾವವೂ ಮುಖ್ಯವಾಗುತ್ತದೆ. ಸರ್ಕಾರದ ಯೋಜನೆಯಿದೆ ಎಂದು, ಆ ಯೋಜನೆಗೆ ಒಳಪಡದಿದ್ದರೂ ಫಲಾನುಭವಿಯಾಗಲು ಹವಣಿಸುವುದು ನೈತಿಕವಾಗಿ ಸರಿಯಾದ ಹೆಜ್ಜೆಯಾಗದು.

Latest Posts

ಲೈಫ್‌ಸ್ಟೈಲ್