ಡ್ರಗ್ ಪೆಡ್ಲರ್ ಅನೂಪ್​ಗೆ ಶಾಕ್ ನೀಡಲು ‘ಇಡಿ’ ಸಿದ್ಧತೆ

enforcement-directorate 9 MAY 20
Published on

ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಕೋಟ್ಯಂತರ ರೂ. ಅಕ್ರಮ ಹಣ ವರ್ಗಾವಣೆಯಾಗಿರುವ ಘಾಟು ಬಡಿಯುತ್ತಿದ್ದಂತೆ ಕಾರ್ಯ ಪ್ರವೃತ್ತರಾಗಿರುವ ಜಾರಿ ನಿರ್ದೇಶನಾಲಯ (ಇಡಿ), ಎನ್​ಸಿಬಿಯಿಂದ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಮಹಮದ್ ಅನೂಪ್ (38) ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದೆ.

ಹೇಳಿಕೆ ದಾಖಲಿಸಲು ಅನುಮತಿ ನೀಡುವಂತೆ ಕೋರ್ಟ್​ಗೆ ಮನವಿ ವಿದೇಶದಿಂದ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಪೂರೈಕೆ ಆರೋಪ

ಡ್ರಗ್ಸ್ ದಂಧೆ ಜಾಡು ಹಿಡಿದು ಹೊರಟಿರುವ ಇಡಿ ಅಧಿಕಾರಿಗಳಿಗೆ ತನಿಖೆ ವೇಳೆ ಮಹತ್ವದ ಮಾಹಿತಿ ಸಿಕ್ಕಿದೆ. ಬೆಂಗಳೂರಿಗೆ ಡ್ರಗ್ಸ್ ಪೂರೈಸುತ್ತಿದ್ದ ಕೇರಳ ಮೂಲದ ಅನೂಪ್ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ನೀಡುವಂತೆ ವಿಶೇಷ ಎನ್​ಡಿಪಿಎಸ್ ನ್ಯಾಯಾಲಯಕ್ಕೆ ಇಡಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕೋರ್ಟ್ ಅನುಮತಿ ನೀಡಿದ ಕೂಡಲೆ ಸೆಂಟ್ರಲ್ ಜೈಲಿನಲ್ಲಿರುವ ಅನೂಪ್​ನಿಂದ ಹೇಳಿಕೆ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಬರುವ ಸೋಮವಾರ ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ.

ಅನೂಪ್ ಕೆಲ ವರ್ಷಗಳಿಂದ ದಂಧೆಯಲ್ಲಿ ತೊಡಗಿ ಡ್ರಗ್ ಪೆಡ್ಲರ್​ಗಳಿಗೆ ಕೋಟ್ಯಂತರ ರೂ. ಅಕ್ರಮ ಹಣ ವರ್ಗಾವಣೆ ಮಾಡಲು ನೆರವಾಗಿದ್ದ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಅನೂಪ್ ಹೇಳಿಕೆ ಪಡೆದ ಬಳಿಕ ಆತನೊಂದಿಗೆ ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಂಡಿದ್ದ ಅನಿಕಾ ಹಾಗೂ ರಿಜೇಶ್ ಹೇಳಿಕೆ ಪಡೆಯಲಾಗುವುದು. ನಂತರ ಮೂವರನ್ನೂ ವಶಕ್ಕೆ ಪಡೆದು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಡ್ರಗ್ಸ್ ಜಾಲದಲ್ಲಿ ನಡೆದ ಹಣಕಾಸು ವಹಿವಾಟಿನ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದು ಇಡಿ ಉನ್ನತ ಮೂಲಗಳು ವಿಜಯವಾಣಿಗೆ ತಿಳಿಸಿವೆ.

ವಿದೇಶಗಳಿಗೆ ಡ್ರಗ್ಸ್ ಸಾಗಾಟ

ರಿಜೇಶ್ ಸಹಕಾರದಿಂದ ಜರ್ಮನಿ, ಬೆಲ್ಜಿಯಂ ಸೇರಿ ಹಲವು ದೇಶಗಳಿಂದ ಅನೂಪ್ ಬೆಂಗಳೂರಿಗೆ ಡ್ರಗ್ಸ್ ತರಿಸುತ್ತಿದ್ದ. ಈ ವೇಳೆ ಕೋಟ್ಯಂತರ ರೂ. ವಿದೇಶಗಳಿಗೆ ಹರಿದು ಹೋಗಿರುವ ಬಗ್ಗೆ ಇಡಿಗೆ ಸುಳಿವು ಸಿಕ್ಕಿದೆ. 2013ರಲ್ಲಿ ಕೇರಳದಲ್ಲಿ ಪಿಯುಸಿ ಮುಗಿಸಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಅನೂಪ್, ದಿಢೀರ್ ಶ್ರೀಮಂತನಾಗಲು ಅಡ್ಡ ದಾರಿ ಹಿಡಿದು ಡ್ರಗ್ಸ್ ಪೂರೈಕೆಯಲ್ಲಿ ತೊಡಗಿದ್ದ. 2015ರಲ್ಲಿ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ತೆರೆದಿದ್ದ. ಡ್ರಗ್ಸ್ ಮೂಲಕ ಲಕ್ಷಾಂತರ ರೂ. ಸಂಪಾದಿಸಿ ಕೇರಳದಲ್ಲಿ ಆಸ್ತಿ, ಮನೆ ಹಾಗೂ ಕೆಲ ಉದ್ಯಮ ನಡೆಸಲು ಮುಂದಾಗಿದ್ದ. ಆದರೆ, ಕರೊನಾ ಹಿನ್ನೆಲೆಯಲ್ಲಿ ವ್ಯಾಪಾರವಿಲ್ಲದೇ ನಷ್ಟ ಉಂಟಾದ ಕಾರಣ ಮತ್ತೆ ಬೆಂಗಳೂರಿಗೆ ಬಂದು ಡ್ರಗ್ಸ್ ಪೆಡ್ಲಿಂಗ್ ದಂಧೆ ಆರಂಭಿಸಿ ಎನ್​ಸಿಬಿಗೆ ಬಲೆಗೆ ಬಿದ್ದಿದ್ದಾನೆ.

ಕೇರಳ ಇಡಿಯಿಂದ ಮಾಹಿತಿ

ಕೇರಳ ಚಿನ್ನ ಸ್ಮಗ್ಲಿಂಗ್ ಕೇಸ್​ನಲ್ಲಿ ಸಿಕ್ಕಿಬಿದ್ದಿರುವ ಸಪ್ನಾ ಸುರೇಶ್ ತಂಡದ ಜತೆ ನಂಟು ಹೊಂದಿದ್ದಾನೆ ಎನ್ನಲಾಗುತ್ತಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿಯನ್ನು ಬೆಂಗಳೂರು ಡ್ರಗ್ಸ್ ಕೇಸ್​ನಲ್ಲಿ ಕೇರಳ ಇಡಿ ವಿಚಾರಣೆ ನಡೆಸಿದೆ. ಆ ವೇಳೆ ಬಿನೀಶ್ ಆರೋಪಿ ಅನೂಪ್ ಜತೆ ಹಣಕಾಸು ವ್ಯವಹಾರ ನಡೆಸಿರುವುದು ಗೊತ್ತಾಗಿದೆ. ಈ ಬೆಳವಣಿಗೆ ಬಳಿಕ ಕೇರಳ ಇಡಿ ಅಧಿಕಾರಿಗಳು ಬೆಂಗಳೂರು ವಲಯದ ಇಡಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

ಆಸ್ತಿ-ಪಾಸ್ತಿ ಮಾಹಿತಿ ಕಲೆ ಹಾಕುತ್ತಿರುವ ಇಡಿ

ಬಂಧನದಲ್ಲಿರುವ ವಿರೇನ್ ಖನ್ನಾ, ಸಂಜನಾ, ರಾಗಿಣಿ, ರವಿಶಂಕರ್, ರಾಹುಲ್​ಗೆ ಸಂಬಂಧಿಸಿದಂತೆ ಕಳೆದ 10 ವರ್ಷಗಳಲ್ಲಿ ಅವರು ತೆರಿಗೆ ಪಾವತಿ ಮಾಡಿರುವ ಬಗ್ಗೆ ಮಾಹಿತಿ ನೀಡುವಂತೆ ಇಡಿ ಅಧಿಕಾರಿಗಳು ಆದಾಯ ತೆರಿಗೆ (ಐಟಿ) ಅಧಿಕಾರಿಗಳಿಗೆ ಪತ್ರ ಮುಖೇನ ಕೋರಿದ್ದಾರೆ. ಕೆಲ ಬ್ಯಾಂಕ್​ಗಳಲ್ಲಿ ಅವರು ಹೊಂದಿರುವ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ಬ್ಯಾಂಕ್​ಗಳಿಗೆ ಸೂಚಿಸಲಾಗಿದೆ. ಅವರು ಹೊಂದಿರುವ ಆಸ್ತಿಗಳ ವಿವರ ನೀಡುವಂತೆ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೂ ಇಡಿ ಕೇಳಿದೆ. ಸಂಜನಾ ಕೋಟ್ಯಂತರ ರೂ. ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net