

ಬೆಳ್ತಂಗಡಿ: ಅಂಕಗಳು ಎಂದಿಗೂ ನಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ನಮ್ಮ ಕೌಶಲಗಳು ನಮ್ಮ ಅಭಿವೃದ್ಧಿಗೆ ಪೂರಕವಾಗುತ್ತವೆ. ಅದಕ್ಕಾಗಿ, ಕಾಲೇಜು ದಿನಗಳಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಜಿರೆ ಎಸ್‌ಡಿಎಂ ಕಾಲೇಜು ಹಿರಿಯ ವಿದ್ಯಾರ್ಥಿನಿ ಧನ್ಯಾ ಪ್ರಭು ಹೇಳಿದರು.
ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ಗ್ರಾಮೀಣಾಭಿವೃದ್ಧಿ ವಿಭಾಗದ ವತಿಯಿಂದ ಶುಕ್ರವಾರ ರಾಜ್ಯಮಟ್ಟದ ಅಂತರ ಕಾಲೇಜು ಸ್ಪರ್ಧೆ ‘ಎಕೋವಿಷನ್-2025’ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿದ್ದರು. ಧನ್ಯಾ ಪ್ರಭು ಅವರನ್ನು ಗೌರವಿಸಲಾಯಿತು. ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅರ್ಥಶಾಸ ಮತ್ತು ಗ್ರಾಮೀಣಾಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ಗಣರಾಜ ಕೆ. ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ.ಮಹೇಶ್ ಕುಮಾರ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿ ಪುನೀತ್ ಕೆ.ಎನ್. ನಿರೂಪಿಸಿದರು.
ಕಲಿಕೆ ಎಂದರೆ ಪಾಠ ಮಾಡುವುದು, ಕಲಿಯುವುದು ಹಾಗೂ ತಿದ್ದುವುದಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಅದರ ಚಿತ್ರಣ ಇಂದು ಬದಲಾಗಿದೆ. ಅವುಗಳೊಂದಿಗೆ ಈಗ ಕೌಶಾಲಾಭಿವೃದ್ಧಿ ಕೂಡ ಸೇರಿಕೊಂಡಿದೆ. ನಾವು ಮೊಬೈಲ್‌ಗಳನ್ನು ಹೇಗೆ ಕಾಲಕ್ಕೆ ತಕ್ಕಂತೆ ಬದಲಿಸುತ್ತೇವೆಯೋ ಹಾಗೆಯೇ ಶಿಕ್ಷಣವೂ ಸಹ ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ನಾವು ಕೌಶಲ, ಮೌಲ್ಯ ಹಾಗೂ ಗುಣವನ್ನು ಉತ್ತಮವಾಗಿ ಬೆಳೆಸಿಕೊಂಡಾಗ ಮಾತ್ರ ಜ್ಞಾನ ಹಾಗೂ ವ್ಯಕ್ತಿತ್ವ ವಿಕಸನವಾಗುತ್ತದೆ. ಡಾ.ವಿಶ್ವನಾಥ ಪಿ. ಪ್ರಾಂಶುಪಾಲ