ಜಮ್ಮು-ಕಾಶ್ಮೀರ ವಿಧಾನಸಭೆಗೆ ಶೀಘ್ರ ಚುನಾವಣೆ: ಚುನಾವಣಾ ಆಯೋಗ ಸುಳಿವು

ec
Published on

ಬೆಂಗಳೂರು: ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ನೋಂದಾಯಿತ ಗುರುತಿಸಲ್ಪಡದ ಪಕ್ಷಗಳಿಂದ 'ಸಾಮಾನ್ಯ ಚಿಹ್ನೆ'ಗಳನ್ನು ಹಂಚಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಮೂಲಕ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂಬ ಸುಳಿವನ್ನು ಚುನಾವಣಾ ಆಯೋಗ ನೀಡಿದೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿದ ಚುನಾವಣಾ ಆಯೋಗ ಕುರಿತ ಪ್ರತಿಕಾ ಪ್ರಕಟಣೆ ಇತ್ತೀಚಿನ ಅಧಿಸೂಚನೆಯಲ್ಲಿ 1968ರ ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶದ ಪ್ಯಾರಾ 10 ಅಡಿ ಸಾಮಾನ್ಯ ಚಿಹ್ನೆಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸುವ ನಿರ್ಧಾರವನ್ನು ಘೋಷಿಸಿತು.

ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳು ತಮ್ಮ 'ಮೀಸಲು ಚಿಹ್ನೆಗಳನ್ನು' ಹೊಂದಿದ್ದರೂ, ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳು ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಚುನಾವಣಾ ಚಿಹ್ನೆಗಳ ಆದೇಶದ ಅಡಿಯಲ್ಲಿ, ಯಾವುದೇ ನೋಂದಾಯಿತ ಗುರುತಿಸದ ರಾಜಕೀಯ ಪಕ್ಷವು ಸದನದ ಅವಧಿ ಮುಗಿಯುವ ಆರು ತಿಂಗಳ ಮೊದಲು 'ಸಾಮಾನ್ಯ ಚಿಹ್ನೆ'ಗಾಗಿ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನೂ ಯಾವುದೇ ಕ್ರಿಯಾತ್ಮಕ ಅಸೆಂಬ್ಲಿ ಇಲ್ಲದ ಕಾರಣ ಚುನಾವಣಾ ಆಯೋಗ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

ವಿಧಾನಸಭೆ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯನ್ನು ಸೆಪ್ಟೆಂಬರ್ 30ರೊಳಗೆ ನಡೆಸುವಂತೆ ಚುನಾವಣಾ ಸಮಿತಿಗೆ ಸೂಚಿಸಿತ್ತು. ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ ಎಂಬ ಊಹಾಪೋಹಗಳು ಇತ್ತು. ಈ ಕುರಿತು ಕೇಳಿದಾಗ "ತಾರ್ಕಿಕ ಮತ್ತು ಭದ್ರತೆ" ಕಾರಣಗಳಿಂದಾಗಿ ಏಕಕಾಲದಲ್ಲಿ ಚುನಾವಣೆ ನಡೆಸಲು ಪ್ರಯೋಗಿಕವಾಗಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿತ್ತು.

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್, ಈ ವಾರದ ಆರಂಭದಲ್ಲಿ, ಸಮಿತಿಯು ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣಾ ಪ್ರಕ್ರಿಯೆಯನ್ನು "ಶೀಘ್ರದಲ್ಲೇ" ಪ್ರಾರಂಭಿಸಲಿದೆ ಎಂದು ಹೇಳಿದ್ದರು.

"ನಾವು ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ, ಮತದಾರರ ಮತದಾನದಿಂದ ನಾವು ಉತ್ಸುಕರಾಗಿದ್ದೇವೆ. ಜಮ್ಮು ಮತ್ತು ಕಾಶ್ಮೀರವು ನಾಲ್ಕು ದಶಕಗಳಲ್ಲಿ ಒಟ್ಟಾರೆ 58.58 ಶೇಕಡಾ ಮತ್ತು ಕಣಿವೆಯಲ್ಲಿ ಶೇಕಡಾ 51.05 ರಷ್ಟು ಮತದಾನವನ್ನು ದಾಖಲಿಸಿದೆ" ಎಂದು ಅವರು ಹೇಳಿದರು.

ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆದಿಲ್ಲ. ರಾಜ್ಯವನ್ನು ಇಬ್ಭಾಗ ಮಾಡಿದ್ದ ಸರಕಾರ, ಎರಡು ಕೇಂದ್ರಾಳಿತ ಪ್ರದೇಶವಾಗಿ ರಚಿಸಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡಲಾಗಿದ್ದು, 83 ಕ್ಷೇತ್ರಗಳಿಂದ 90ಕ್ಕೆ ಹೆಚ್ಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net