

ನವದೆಹಲಿ: ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಪಾತ್ರವನ್ನು ವಹಿಸುವಂತೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡುವ ನಿರ್ಣಯವನ್ನು ಅಂಗೀಕರಿಸಿದೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿ ಅವರಿಗೆ ಸಿಡಬ್ಲ್ಯುಸಿ ಸರ್ವಾನುಮತದಿಂದ ವಿನಂತಿಸಿದೆ. ಸಂಸತ್ತಿನ ಒಳಗೆ ಈ ಅಭಿಯಾನವನ್ನು ಮುನ್ನಡೆಸಲು ರಾಹುಲ್ ಗಾಂಧಿ ಅವರು ಅತ್ಯುತ್ತಮ ವ್ಯಕ್ತಿ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ನಮ್ಮ ನಾಯಕ ರಾಹುಲ್ ಗಾಂಧಿ ಮತ್ತು ಕಾರ್ಯಕರ್ತರು ಅಚಲವಾದ ಹೋರಾಟದಿಂದ ಕಾಂಗ್ರೆಸ್ ಮತ್ತೆ ಪುನಶ್ಚೇತನ ಆರಂಭವಾಗಿದೆ ಎಂದು ವೇಣುಗೋಪಾಲ್ ಹೇಳಿದರು. ಸಿಡಬ್ಲ್ಯುಸಿಯಲ್ಲಿನ ವಾತಾವರಣವು ನಾಲ್ಕು ತಿಂಗಳ ಹಿಂದೆ ಇದ್ದದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಅವರು ಹೇಳಿದರು.
CWC ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ, "ಖಂಡಿತವಾಗಿಯೂ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಬೇಕು. ಇದು ನಮ್ಮ ಕಾರ್ಯಕಾರಿ ಸಮಿತಿಯ ವಿನಂತಿಯಾಗಿತ್ತು ಎಂದು ಹೇಳಿದರು.