Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್ಗೆ ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಅ. 30ರಂದು ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ದರ್ಶನ್ ಸದ್ಯ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ ಬಿಡುಗಡೆಯಿಂದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಆದರೆ, ದರ್ಶನ್ ಸ್ವಲ್ಪ ಎಚ್ಚರತಪ್ಪಿದರೂ ಭಾರಿ ಸಂಕಷ್ಟವನ್ನೇ ಎದುರಿಸಬೇಕಾಗುತ್ತದೆ.
ಷರತ್ತುಗಳನ್ನು ವಿಧಿಸಿ ಮಧ್ಯಂತರ ಜಾಮೀನು
ಅನಾರೋಗ್ಯದ ಆಧಾರದ ಮೇಲೆ ನಟ ದರ್ಶನ್ ಅವರಿಗೆ ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. 131 ದಿನಗಳ ಬಳಿಕ ದರ್ಶನ್ ಜೈಲಿನಿಂದ ಹೊರಬಂದಿದ್ದಾರೆ. ನಾನು ತೀವ್ರ ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಈ ಹಿನ್ನೆಲೆ ಮಧ್ಯಂತರ ಜಾಮೀನು ನೀಡಿ ಎಂದು ನಟ ದರ್ಶನ್ ಅರ್ಜಿ ಸಲ್ಲಿಸಿದ್ದರು. ಅ.29ರಂದು ನಟ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರು ಮಂಡಿಸಿದ್ದರು. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿಯವರ ಏಕಸದಸ್ಯ ಪೀಠ ನಿನ್ನೆ (ಅ.30) ತೀರ್ಪು ಪ್ರಕಟಿಸಿತು. ಈ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದು, ನಟ ದರ್ಶನ್ ತಮಗಿರುವ ಆರೋಗ್ಯ ಸಮಸ್ಯೆಗೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೆ, ಒಂದು ವಾರದಲ್ಲಿ ದರ್ಶನ್ ಚಿಕಿತ್ಸೆಯ ವಿವರವನ್ನು ಸಹ ಕೋರ್ಟ್ ಸಲ್ಲಿಸಬೇಕಿದೆ. ಇನ್ನು ದರ್ಶನ್ ಪಾಸ್ಪೋರ್ಟ್ ಅನ್ನು ಕೂಡ ಕೋರ್ಟ್ ವಶಕ್ಕೆ ನೀಡಬೇಕಿದೆ.
ಎಚ್ಚರ ತಪ್ಪಿದ್ರೂ ಬೇಲ್ ಕ್ಯಾನ್ಸಲ್
ದರ್ಶನ್ಗೆ ಸಿಕ್ಕಿರುವುದು ಕೇವಲ ಮಧ್ಯಂತರ ಜಾಮೀನು ಮಾತ್ರ. ಅದು ಕೂರ ಕೇವಲ 6 ವಾರಗಳು. ಈ ಸಮಯದಲ್ಲಿ ದರ್ಶನ್ ಅವರ ಗಮನ ಆರೋಗ್ಯದ ಮೇಲೆ ಮಾತ್ರ ಇರಬೇಕು. ಅದನ್ನು ಬಿಟ್ಟು ಬೇರೆ ಕೆಲಸಗಳಿಗೆ ಕೈಹಾಕುವಂತಿಲ್ಲ. ದರ್ಶನ್ ಅವರ ಪ್ರತಿಯೊಂದು ನಡೆಯನ್ನು ಪೊಲೀಸರು ಮತ್ತು ನ್ಯಾಯಾಲಯ ಗಮನಿಸುತ್ತಿರುತ್ತದೆ. ಕೋರ್ಟ್ ಹೇಳಿದನ್ನು ಪಾಲಿಸುವಲ್ಲಿ ಸ್ವಲ್ಪ ವ್ಯತ್ಯಾವಾದರೂ ಜಾಮೀನು ರದ್ದಾಗುವ ಸಾಧ್ಯತೆ ಇದೆ. ಅಲ್ಲದೆ, ಸಾಮಾನ್ಯ ಜಾಮೀನಿಗೂ ಕಂಟಕ ಎದುರಾಗುವ ಸಾಧ್ಯತೆ ಇದೆ. ನಿಯಮಗಳನ್ನು ಪಾಲಿಸುವಲ್ಲಿ ದರ್ಶನ್ ವಿಫಲವಾದರೆ ಅದನ್ನೇ ಮುಂದಿಟ್ಟುಕೊಂಡು ಪೊಲೀಸರ ಪರ ವಕೀಲರು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಇನ್ನು ಅಭಿಮಾನಿಗಳು ಕೂಡ ಬಹಳ ಎಚ್ಚರಿಕೆ ವಹಿಸಬೇಕಾಗಿದೆ. ತಮ್ಮ ನೆಚ್ಚಿನ ನಟ ಬಿಡುಗಡೆಯಾದರು ಅಂತ ಅತಿರೇಕದ ವರ್ತನೆ ತೋರಿದರೆ ಅದು ಕೂಡ ದರ್ಶನ್ ಜಾಮೀನಿನ ಮೇಲೆ ಪರಿಣಾಮ ಬೀರುತ್ತದೆ.
ಸುಪ್ರೀಂಕೋರ್ಟ್ ಮೊರೆ
ಮಧ್ಯಂತರ ಜಾಮೀನು ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಸುಪ್ರೀಂಕೊರ್ಟ್ ಮೆಟ್ಟಿಲೇರಲು ಪ್ರಕರಣದ ತನಿಖಾಧಿಕಾರಿಗಳು ನಿರ್ಧಾರ ಮಾಡಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ಬೆಂಗಳೂರು ಪೊಲೀಸರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹೈಕೋರ್ಟ್ ಆದೇಶದ ಪೂರ್ಣ ಪ್ರತಿಗೆ ಬೆಂಗಳೂರು ಪೊಲೀಸರು ಕಾಯುತ್ತಿದ್ದಾರೆ. ದೀಪಾವಳಿ ರಜೆ ಹಿನ್ನೆಲೆಯಲ್ಲಿ ಆದೇಶದ ಪೂರ್ಣ ಪ್ರತಿ ಇನ್ನೂ ಸಿಕ್ಕಿಲ್ಲ. ಸೋಮವಾರ ಆದೇಶ ಪ್ರತಿ ಸಿಗುತ್ತಿದ್ದಂತೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ, ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದು ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದರೆ, ಬಿಡುಗಡೆಯಾದ ಸಂತೋಷದಲ್ಲಿರುವ ನಟ ದರ್ಶನ್ಗೆ ಮತ್ತೊಂದು ತಲೆನೋವು ಕಾಡಲಿದೆ.
ದರ್ಶನ್ ಪರ ಸಿ.ವಿ ನಾಗೇಶ್ ಮಂಡಿಸಿದ ವಾದ
ಅರ್ಜಿದಾರರ ದೇಹದಲ್ಲಿ ಸಮರ್ಪಕವಾಗಿ ರಕ್ತಪರಿಚಲನೆ ಆಗುತ್ತಿಲ್ಲ, ಪಾದಗಳಲ್ಲಿ ನಂಬ್ ನೆಸ್ (ಮರಗಟ್ಟುವಿಕೆ) ಇದೆ. ಡಿಸ್ಕ್ ಸಮಸ್ಯೆ ಇದೆ. ಕಾಲಿನಲ್ಲಿ ನರದ ತೊಂದರೆ ಉಂಟಾಗಿದ್ದು, ಈಗಾಗಲೇ ಸ್ವಲ್ಪ ಮಟ್ಟಿಗೆ ಪಾದ ಸ್ಪರ್ಶ ಕಳೆದುಕೊಂಡಿದ್ದಾರೆ. ಹೀಗಿರುವಾಗ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲವಾದರೆ, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ಎಡಮಾಡಿಕೊಡಬಹುದು. ವೈದ್ಯಕೀಯ ವರದಿಯಲ್ಲಿಯೂ ದರ್ಶನ್ ಅವರು ಪಾರ್ಶ್ವವಾಯು ತುತ್ತಾಗುವ ಸಾಧ್ಯತೆ ಅಧಿಕವಾಗಿದ್ದು, ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಎಂದಿದೆ. ಇವೆಲ್ಲವನ್ನೂ ಗಮನಿಸಿ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಪರ ವಕೀಲ ಪ್ರಸನ್ನ ಕುಮಾರ್ ವಾದ
ವೈದ್ಯಕೀಯ ವರದಿಯಲ್ಲಿ ಪಾರ್ಶ್ವವಾಯು ತುತ್ತಾಗುತ್ತಾರೆ ಎಂದಿಲ್ಲ, ತುತ್ತಾಗಬಹುದು ಎಂದು ವೈದ್ಯರು ಅಂದಾಜಿಸಿದ್ದಾರಷ್ಟೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ ನಿಮ್ಮ ಮಾತಿನ ಅರ್ಥವೇನು? ಅರ್ಜಿದಾರರು ಅನಾರೋಗ್ಯದ ಅಂತಿಮ ಹಂತಕ್ಕೆ ತಲುಪುವರೆಗೆ ಕಾಯಬೇಕು ಎನ್ನುವುದೇ ಎಂದು ಪ್ರಶ್ನಿಸಿತು. ತದನಂತರ ಸರ್ಕಾರಿ ಪರ ವಕೀಲರನ್ನು ಉದ್ದೇಶಿಸಿ ನೋಡಿ ಆರೋಗ್ಯ ಎಂಬುವುದು ಮಾನವನ ಮೂಲಭೂತ ಹಕ್ಕು. ವ್ಯಕ್ತಿ ಆರೋಪಿಯಾಗಿರಲಿ, ಅಪರಾಧಿಯಾಗಿರಲಿ ಆರೋಗ್ಯ ಎಂಬುದು ಮುಖ್ಯವಾಗಿರುತ್ತದೆ. ಈ ರೀತಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ, ಇದನ್ನು ಸುಪ್ರೀಂಕೋರ್ಟ್ ಸಹ ಹಲವು ವೇಳೆ ಪುನುರುಚ್ಚರಿಸಿದೆ ಎಂದಿತು.
ವಾದ-ಪತ್ರಿವಾದ ಆಲಿಸಿದ ನ್ಯಾಯಪೀಠ ಅ.30ರಂದು ತೀರ್ಪು ಪ್ರಕಟಿಸುವ ಮೂಲಕ ದರ್ಶನ್ ಅವರಿಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿತು. (ಏಜೆನ್ಸೀಸ್)
ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಹೊರಬಂದ ಬೆನ್ನಲ್ಲೇ ನಟ ದರ್ಶನ್ಗೆ ಬಿಗ್ ಶಾಕ್! Actor Darshan