

ಕಾರವಾರ: ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಮುಡಗೇರಿಯಲ್ಲಿ ಕೆಐಡಿಬಿ ಸ್ವಾಧೀನ ಮಾಡಿದ ಭೂಮಿಗೆ ಪರಿಹಾರ ಹಣ ಬಿಡುಗಡೆಯಾಗುತ್ತಿದೆ ಎಂದು ಮುಡಗೇರಿ ಗ್ರಾಪಂ ಅಧ್ಯಕ್ಷ ಸುರೇಂದ್ರ ಗಾಂವಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದಿನ ಶಾಸಕಿ ರೂಪಾಲಿ ನಾಯ್ಕ ಪ್ರಯತ್ನದ ಫಲವಾಗಿ ಪ್ರತಿ ಎಕರೆಗೆ 50 ಲಕ್ಷ ರೂ. ಪರಿಹಾರ ಕಳೆದ ಮಾರ್ಚ್ ನಲ್ಲಿ ಮಂಜೂರಾಗಿತ್ತು. ಆದರೆ, ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದರಿಂದ ರೈತರ ಕೈಗೆ ಪರಿಹಾತ ಸಿಕ್ಕಿರಲಿಲ್ಲ. ಈಗ ಮೂವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗಿದೆ. ಉಳಿದ 130 ಕ್ಕೂ ಅಧಿಕ ಭೂ ಮಾಲೀಕರಿಗೆ ಶೀಘ್ರ ಪರಿಹಾರ ಲಭ್ಯವಾಗುವ ಸಾಧ್ಯತೆ ಇದೆ ಎಂದರು.
ಮುಡಗೇರಿಯಲ್ಲಿ 26 ವರ್ಷಗಳ ಹಿಂದೆಯೇ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿತ್ತು. ಆದರೆ, ರೈತರಿಗೆ ನ್ಯಾಯ ದೊರಕಿರಲಿಲ್ಲ. ರೂಪಾಲಿ ನಾಯ್ಕ ಅವರು ಸತತ ಪ್ರಯತ್ನದಿಂದ ರೈತರಿಗೆ ನ್ಯಾಯ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 1 ರಂದು ಬೆಳಗ್ಗೆ 11.30 ಕ್ಕೆ ಮುಡಗೇರಿಯಲ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದರು.
131 ಎಕರೆ ಸ್ವಾಧೀನ ಮಾಡಲಿ:
ಮುಡಗೇರಿಯಲ್ಲಿ ಒಟ್ಟಾರೆ 204 ಎಕರೆಗೆ ಭೂ ಸ್ವಾಧೀನಕ್ಕೆ ಯೋಜನೆ ರೂಪಿಸಲಾಗಿತ್ತು. ಪ್ರಾರಂಭದಲ್ಲಿ 73 ಎಕರೆ ಜಮೀನು ಸ್ವಾಧೀನಕ್ಕೆ ಕೆಐಡಿಬಿ ಅಽಸೂಚನೆ ಹೊರಡಿಸಿದೆ. ಈಗ ಹಣವೂ ಬಿಡುಗಡೆಯಾಗುತ್ತಿದೆ. ಹಾಲಿ ಶಾಸಕ ಸತೀಶ ಸೈಲ್ ಉಳಿದ 131 ಎಕರೆ ಭೂಮಿ ಸ್ವಾಧೀನಕ್ಕೆ ಕ್ರಮ ವಹಿಸಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಕಾಡಾನೆಗಳಿಂದ ಅಡಕೆ, ಕಬ್ಬು, ಭತ್ತದ ಬೆಳೆ ನಾಶ
ಈಗ ಸ್ವಾಧೀನ ಪ್ರಕ್ರಿಯೆಯಲ್ಲಿರುವ 73 ಎಕರೆಯಲ್ಲಿ ಪ್ಲಾಟ್‌ಗಳನ್ನು ಮಾಡಿ ಹಂಚಿಕೆ ಮಾಡಲಾಗುವುದು ಎಂದು ಕೆಐಡಿಬಿ ಹೇಳುತ್ತಿದೆ. ಅದಕ್ಕೆ ಮುಡಗೇರಿ ಗ್ರಾಪಂ ಒಪ್ಪಿಗೆ ಇಲ್ಲ. ಒಂದೇ ಕೈಗಾರಿಕೆ ತಂದು ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆಯನ್ನು ಸತೀಶ ಸೈಲ್ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಸದಸ್ಯ ನಂದಕಿಶೋರ ನಾಯ್ಕ ಮಾತನಾಡಿ, ಭೂ ಸ್ವಾಧೀನ ಪ್ರಕ್ರಿಯೆ ಸರಳ ಮಾಡಲು ತಹಸೀಲ್ದಾರರು ಮುಡಗೇರಿಯಲ್ಲಿ ಬಂದು ಕ್ಯಾಂಪ್ ಮಾಡುವುದಾಗಿ ತಿಳಿಸಿದ್ದರು. ಆ ಕ್ಯಾಂಪ್ ಮಾಡಬೇಕು ಎಂದು ಒತ್ತಾಯಿಸಿದರು. ಗ್ರಾಪಂ ಸದಸ್ಯರಾದ ಸುನೀಲ ನಾಯ್ಕ, ಸೀಮಾ ನಾಯ್ಕ, ಜ್ಯೋತಿ ಚೋಳಾರ್, ರೈತ ಭಿಕಾಜಿ ಗಾಂವಕರ್, ಆನಂದು ಸೀತಾರಾಮ ನಾಯ್ಕ, ವಿದ್ಯಾ ರಾಜೇಂದ್ರ ಗುರವ್ ಸುದ್ದಿಗೋಷ್ಠಿಯಲ್ಲಿದ್ದರು.