ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಭಾರಿ ಮಳೆಯಿಂದಾಗಿ ಅಡಕೆಗೆ ಕೊಳೆರೋಗ ಉಂಟಾಗುವ ಲಕ್ಷಣ ಗೋಚರಿಸಿದೆ. ತಾಲೂಕಿನಲ್ಲಿ ಮಳೆ ತೀವ್ರತೆ ಹೆಚ್ಚಾಗಿ ಬಹುತೇಕ ರೈತರ ತೋಟದಲ್ಲಿ ಅಡಕೆ ಉದುರಿ ಕೊಳೆಯುತ್ತಿದೆ.
ಕೆಲವು ದಿನಗಳಿಂದ ಬಿಸಿಲು ಮಳೆ ಕೂಡಿದ ವಾತಾವರಣ ಇದೆ. ಪ್ರಮುಖವಾಗಿ ಕೊಳೆರೋಗ ಬರಲು ಇದು ಕಾರಣ. ಪೊಟ್ಯಾಷ್ ಕಡಿಮೆಯಾಗಿ, ಸಾರಜನಕ ಹೆಚ್ಚಾಗಿ ನಿರೋಧಕಶಕ್ತಿ ಕಡಿಮೆಯಾಗಿ ಕೊಳೆರೋಗ ಬರುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಕೊಳೆರೋಗ ನಿಯಂತ್ರಣ ತರಬೇಕಾದರೆ ಮಣ್ಣು ಪರೀಕ್ಷೆ ಮಾಡಬೇಕು. 100 ಲೀಟರ್ ನೀರಿಗೆ ಒಂದು ಕೆ.ಜಿ ಮೈಲ್‌ತುತ್ತು ಹಾಗೂ ಸುಣ್ಣ ಮಿಶ್ರಣ ಮಾಡಿ ಹಾಕಿ ಅಡಕೆಗೆ ಸಿಂಪಡಣೆ ಮಾಡಿದರೆ ನಿಯಂತ್ರಣಕ್ಕೆ ತರಬಹುದು. ಮಳೆಗಾಲದಲ್ಲಿ ಪೂರ್ವದಲ್ಲಿ ಬೇವಿನ ಹಿಂಡಿ ಸಾವಯವ ಗೊಬ್ಬರದೊಂದಿಗೆ ಟ್ರೈಕೋಡರ್ಮ ಮಿಶ್ರಣ ಮಾಡಿ ಹಾಕಿದರೆ ಕೊಳೆರೋಗ ತಡೆಯಬಹುದು.
ತೋಟಗಳಲ್ಲಿ ಅಡಕೆಗಳು ಭಾರಿ ಮಳೆಯಿಂದ ಉದುರುತ್ತಿವೆ. ಕೆಲವು ಕಡೆ ಗೊನೆಯಲ್ಲಿ ಏನು ಉಳಿದಿಲ್ಲ. ವಿಪರೀತ ಮಳೆಯಿಂದಾಗಿ ಕೆಲವರಿಗೆ ಇನ್ನೂ ದ್ರಾವಣ ಸಿಂಪಡಿಸಲು ಸಾಧ್ಯವಾಗಿಲ್ಲ. ವ್ಯಾಪಕವಾಗಿ ಅಡಕೆ ಉದುರಿರುವುದರಿಂದ ರೈತ ಕಂಗಾಲಾಗಿದ್ದಾನೆ.
ರೋಗ ನಿಯಂತ್ರಣ
ಬೋರ್ಡೋ ದ್ರಾವಣಕ್ಕೆ ಪರ್ಯಾಯವಾಗಿ ಮಂಡಿ ಪ್ರೊಪಿಮಿಡ್ ಶಿಲೀಂದ್ರನಾಶಕ ಬಳಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ, ಹೆಚ್ಚು ಕೊಳೆಭಾದೆ ಇರುವ ತೋಟಗಳಲ್ಲಿ ಈ ಶಿಲೀಂದ್ರ ನಾಶಕ ಒಂದು ಎಂಎಲ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ, ಅಡಕೆ ಗೊಂಚಲು ಹಾಗೂ ಎಲೆಗಳಿಗೆ ಸಿಂಪಡಣೆ ಮಾಡಬಹುದು. ಇದರಿಂದ ಕೊಳೆರೋಗ ನಿಯಂತ್ರಣ ಸಾಧ್ಯ.
ಬಸಿ ಕಾಲುವೆ
ಬುಡಗಳಲ್ಲಿ ಎಂದು ನೀರು ನಿಲ್ಲಬಾರದು. ಸುಮಾರು ಎರಡು ಅಡಿ ಆಳದ ಬಸಿ ಕಾಲುವೆ ನಿರ್ಮಾಣ ಮಾಡಬೇಕು. ರೋಗದ ನಿಯಂತ್ರಣಕ್ಕೆ ಪ್ರತಿ ಎರಡು ಸಾಲಿಗೆ ಒಂದರಂತೆ ಬಸಿ ಕಾಲುವೆ ಇದ್ದರೆ ಉತ್ತಮ ಎಂದು ಅಧಿಕಾರಿಗಳು ಹೇಳುತ್ತಾರೆ.
ಪ್ರಸ್ತುತ ಹವಾಮಾನ ಕೊಳೆರೋಗ ಹರಡುವಿಕೆಗೆ ಪೂರಕವಾಗಿದೆ. ರೈತರು ಬಿದ್ದ ಕಾಯಿಗಳನ್ನು ಸಂಗ್ರಹಿಸಿ ತೋಟದಿಂದ ಹೊರಕ್ಕೆ ಸಾಗಿಸಬೇಕು ಹಾಗೂ ಬೋರ್ಡೋ ದ್ರಾವಣ ಸಿಂಪರಣೆ ಕೈಗೊಳ್ಳಬೇಕು. ಆಗಸ್ಟ್ ತಿಂಗಳಲ್ಲಿ ಮಣ್ಣು ಪರೀಕ್ಷೆ ಆಧಾರದಲ್ಲಿ ಸುಣ್ಣ ನೀಡಿ 15 – 20 ತಿಂಗಳ ನಂತರ ಶಿಫಾರಸು ಮಾಡಿದ ರಸಗೊಬ್ಬರ ನೀಡಬೇಕು.
-ಶ್ರೀನಿವಾಸ್ ಬಿ.ವಿ. ಹಿರಿಯ ನಿರ್ದೇಶಕರು, ತೋಟಗಾರಿಕಾ ಇಲಾಖೆ ಕಾರ್ಕಳ ತಾಲೂಕು
ತೋಟದಲ್ಲಿ ಬಾರಿ ಪ್ರಮಾಣದ ಅಡಕೆ ಉದುರಿದೆ. ಪ್ರತಿಕೂಲ ಹವಾಮಾನ ವಾತಾವರಣದಿಂದ ಕೊಳೆರೋಗಗಳು ಹೆಚ್ಚಾಗುವ ಲಕ್ಷಣವಿದೆ. ನಾವೆಲ್ಲ ಸಣ್ಣ ರೈತರು ಜೀವನ ಉಪಯೋಗಕ್ಕಾಗಿ ಮಾಡುತ್ತಿದ್ದೆವು. ಕೆಲವು ಅಡಕೆ ಮರದಲ್ಲಿ ನಳ್ಳಿ ಉಳಿದಿಲ್ಲ. ದ್ರಾವಣ ಸಿಂಪಡಣೆ ಮಾಡಲು ಕೂಲಿ ಕಾರ್ಮಿಕರೂ ಸಿಗುತ್ತಿಲ್ಲ.
-ದೀಕ್ಷಿತ್ ನಾಯಕ್, ಬಡಾಗುಡ್ಡೆ ರೈತ