ಪಡುಬಿದ್ರಿ: ದುರ್ವ್ಯಸನ ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ.ಮಹಾಂತ ಶಿವಯೋಗಿಗಳು, ಅವರ ಬದುಕೇ ನಮಗೆ ಪ್ರೇರಣೆ ಎಂದು ತಹಸೀಲ್ದಾರ್ ಪ್ರತಿಭಾ ಆರ್. ಹೇಳಿದರು.
ಕಾಪು ತಾಲೂಕು ಆಡಳಿತ ವತಿಯಿಂದ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಡಾ.ಮಹಾಂತ ಶಿವಯೋಗಿಗಳ ಜನ್ಮದಿನ ವ್ಯಸನ ಮುಕ್ತ ದಿನಾಚರಣೆಯಲ್ಲಿ ಮಾತನಾಡಿದರು.
ಹಲವು ಸಮಾಜಮುಖಿ ಕಾರ್ಯ ಮಾಡಿರುವ ಮಹಾಂತ ಶಿವಯೋಗಿ ಸ್ವಾಮೀಜಿಯವರು ‘ವ್ಯಸನ ಮುಕ್ತ ಸಮಾಜ’ ನಿರ್ಮಾಣಕ್ಕೆ 1975ರಿಂದ ಕೈಗೊಂಡ ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು ಎಂದರು.
ವ್ಯಸನದಿಂದ ದೂರ ಇರುತ್ತೇವೆಂದು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಡಿಡಿಎಲ್‌ಆರ್ ರವೀಂದ್ರ, ಪುರಸಭಾ ಮುಖ್ಯಾಧಿಕಾರಿ ನಾಗರಾಜ್, ಉಪ ತಹಸೀಲ್ದಾರ್‌ಗಳಾದ ದೇವಕಿ, ರವಿಕಿರಣ್, ಅಶೋಕ್, ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್ ಹಾಜರಿದ್ದರು.