

ಬೆಂಗಳೂರು: ರವಿಚಂದ್ರನ್ ಅಭಿನಯದ ‘ಕನ್ನಡಿಗ’ ಚಿತ್ರದ ಡಬ್ಬಿಂಗ್ ಮುಗಿದಿದೆ. ಸದ್ಯದಲ್ಲೇ ಚಿತ್ರವು ಸೆನ್ಸಾರ್ ಆಗಲಿದ್ದು, ಎಲ್ಲ ಅಂದುಕೊಂಡಂತೆ ಆದರೆ, ರಾಜ್ಯೋತ್ಸವದ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
‘ಕನ್ನಡಿಗ’ ಚಿತ್ರವು ಕಳೆದ ವರ್ಷವೇ ಪ್ರಾರಂಭವಾಗಿ, ಕಳೆದ ವರ್ಷವೇ ಮುಗಿದು ಸೆನ್ಸಾರ್ ಸಹ ಆಗಿತ್ತು. ಮೊದಲು ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ, ಆಗಲಿಲ್ಲ. ರವಿಚಂದ್ರನ್ ಹುಟ್ಟುಹಬ್ಬಕ್ಕೆ ಎನ್ನುವಷ್ಟರಲ್ಲಿ ಎರಡನೆಯ ಲಾಕ್ಡೌನ್ ಆಯಿತು. ಈ ಮಧ್ಯೆ, ಎರಡು ಹಾಡುಗಳನ್ನು ಸೇರಿಸುವ ತೀರ್ವನವಾಯಿತು. ಹಾಗೆಯೇ ರವಿಚಂದ್ರನ್ ಅವರಿಂದಲೇ ಡಬ್ಬಿಂಗ್ ಮಾಡಿಸುವುದಕ್ಕೂ ನಿರ್ಧಾರವಾಗಿ, ಅದರಂತೆ ಕಳೆದ ಕೆಲವು ದಿನಗಳಿಂದ ಸತತವಾಗಿ ಡಬ್ಬಿಂಗ್ ಮಾಡಿರುವ ರವಿಚಂದ್ರನ್, ಇತ್ತೀಚೆಗೆ ತಮ್ಮ ಕೆಲಸ ಮುಗಿಸಿದ್ದಾರೆ. ಇದರಿಂದ ಖುಷಿಯಾಗಿರುವ ನಿರ್ದೇಶಕ ಗಿರಿರಾಜ್, ‘‘ಕನ್ನಡಿಗ’ ಡಬ್ಬಿಂಗ್ ಮುಗಿಸಿದ ಕನಸುಗಾರ. ಅತೀ ಶೀಘ್ರದಲ್ಲೇ ಸಿಹಿಸುದ್ದಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇಷ್ಟಕ್ಕೂ ಆ ಸಿಹಿಸುದ್ದಿ ಏನು ಎಂದರೆ, ‘ಮತ್ತೊಮ್ಮೆ ಸೆನ್ಸಾರ್ ಮಾಡಿಸಬೇಕಿದೆ. ಬೇಗ ಸೆನ್ಸಾರ್ ಮುಗಿದರೆ, ರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ಗಿರಿರಾಜ್. ‘ಕನ್ನಡಿಗ’ ಚಿತ್ರದಲ್ಲಿ ರವಿಚಂದ್ರನ್ ಗುಣಭದ್ರ ಮತ್ತು ಸಮಂತಭದ್ರ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಅಚ್ಯುತ್ ಕುಮಾರ್, ಭವಾನಿ ಪ್ರಕಾಶ್, ರಾಕ್ಲೈನ್ ವೆಂಕಟೇಶ್ ಇತರರು ನಟಿಸಿದ್ದಾರೆ.