ಆ ವಿಚಾರ ನನ್ನಿಂದ ಮುಚ್ಚಿಟ್ಟಿದ್ದೇಕೆ? 'ತುಡರಮ್​' ಚಿತ್ರತಂಡ ವಿರುದ್ಧ ಡಬ್ಬಿಂಗ್​ ಆರ್ಟಿಸ್ಟ್​ ಬೇಸರ, ಅಷ್ಟಕ್ಕೂ ಆಗಿದ್ದೇನು? | Dubbing Artist

ಆ ವಿಚಾರ ನನ್ನಿಂದ ಮುಚ್ಚಿಟ್ಟಿದ್ದೇಕೆ? 'ತುಡರಮ್​' ಚಿತ್ರತಂಡ ವಿರುದ್ಧ ಡಬ್ಬಿಂಗ್​ ಆರ್ಟಿಸ್ಟ್​ ಬೇಸರ, ಅಷ್ಟಕ್ಕೂ ಆಗಿದ್ದೇನು? | Dubbing Artist
Published on

ಕೇರಳ: ಮಲಯಾಳಂ ಚಿತ್ರರಂಗದ ಹಿರಿಯ ಹಾಗೂ ದಿಗ್ಗಜ ನಟ ಮೋಹನ್ ಲಾಲ್ ಅಭಿನಯದ 'ತುಡರಮ್'​ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಹಾಗೂ ದಾಖಲೆ ಬರೆದ ಸಿನಿಮಾ (Dubbing Artist). ಮೋಹನ್ ಲಾಲ್​ ಮತ್ತು ಶೋಭಾನ ಮುಖ್ಯಭೂಮಿಕೆಯಲ್ಲಿ ನಟಿಸಿದ ಈ ಚಿತ್ರಕ್ಕೆ ಸಿನಿಪ್ರೇಕ್ಷಕರಿಂದ ಉತ್ತಮ ವಿಮರ್ಶೆ, ಪ್ರಶಂಸೆಗಳು ಹರಿದುಬಂದಿತು. ಚಿತ್ರ ತೆರೆಕಂಡು 6 ತಿಂಗಳ ಬಳಿಕ ಸಿನಿಮಾ ಕುರಿತಂತೆ ತುಟಿಬಿಚ್ಚಿರುವ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ, ಅಸಲಿಗೆ ನಟಿಗೆ ಡಬ್​ ಮಾಡಿರುವುದು ನಾನೇ ಆದರೂ ತೆರೆ ಮೇಲೆ ಹಾಕಿರುವ ಧ್ವನಿ ಮಾತ್ರ ನನ್ನದಲ್ಲ ಎಂಬ ಶಾಕಿಂಗ್ ಸಂಗತಿಯನ್ನು ರಿವೀಲ್ ಮಾಡಿದ್ದಾರೆ.

'ತುಡರಮ್' ಚಿತ್ರದಲ್ಲಿ ಮೋಹನ್ ಲಾಲ್ ಅವರ ಪತ್ನಿಯಾಗಿ ಕಾಣಿಸಿಕೊಂಡಿರುವ ಶೋಭಾನ ಅವರಿಗೆ ಕಂಠದಾನ ಮಾಡಿದ್ದು ನಾನು. ಆದರೆ, ಕೊನೆಯ ಕ್ಷಣದಲ್ಲಿ ನನ್ನ ಧ್ಚನಿಯನ್ನು ಕಿತ್ತು, ನಟಿಯ ಕಂಠವನ್ನೇ ಬಳಸಿಕೊಂಡಿದ್ದಾರೆ. ಮುಖ್ಯವಾಗಿ, ಶೋಭಾನ ಅವರ ಬೆದರಿಕೆಗೆ ಚಿತ್ರತಂಡ ಈ ರೀತಿ ಮಾಡಿತು ಎಂದು ಹೇಳಲಾಗಿದೆ. ನನ್ನ ಪಾತ್ರಕ್ಕೆ ನನ್ನದೇ ಧ್ವನಿಯನ್ನು ಹಾಕಿ. ಇಲ್ಲವಾದರೆ, ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗಲ್ಲ ಎಂದು ನಟಿ ಹೇಳಿದ್ದಾಗಿ ವರದಿಯಾಗಿದೆ.

ಈ ಕುರಿತಂತೆ ಮಾತನಾಡಿರುವ ಭಾಗ್ಯಲಕ್ಷ್ಮಿ, "ನನನ್ನು ಕಂಠದಾನ ಮಾಡಿಕೊಡುವಂತೆ ಮೊದಲು ಸಂಪರ್ಕಿಸಿದ್ದು ಚಿತ್ರದ ನಿರ್ಮಾಪಕರು ರಂಜಿತ್. ನನ್ನ ಧ್ವನಿ ಬದಲಿಗೆ ಶೋಭಾನ ಅವರ ವಾಯ್ಸ್​ ಬಳಿಸಿಕೊಂಡರೆ ಉತ್ತಮ ಎಂದೇ ನಾನು ಮೊದಲಿಗೆ ಹೇಳಿದೆ. ಆದರೂ ಅವರು ನೀವೇ ಮಾಡಿ ಎಂದರು. ಶೋಭಾನ ಪಾತ್ರವನ್ನು ಗಮನಿಸಿದ ಬಳಿಕ ಇನ್ನೊಮ್ಮೆ ಸಲಹೆ ನೀಡಿದೆ. ಈ ಪಾತ್ರಕ್ಕೆ ಅವರೇ ಧ್ವನಿ ಕೊಟ್ಟರೆ ಉತ್ತಮ ಎಂದು. ಆದರೆ, ಅವರು ನೀವೇ ಮಾಡಿಕೊಡಿ ಎಂದು ತಿಳಿಸಿದರು. ಒಂದೇ ದಿನದಲ್ಲಿ ಡಬ್ಬಿಂಗ್ ಮುಗಿಸಿಕೊಟ್ಟೆ. ಆದರೆ, ಯಾವಾಗ ಸಿನಿಮಾ ರಿಲೀಸ್​ ತಡವಾಯಿತೋ ಅಲ್ಲಿಯೇ ನನಗೆ ಸತ್ಯ ಗೊತ್ತಾಗಿದ್ದು" ಎಂದು ಹೇಳಿದ್ದಾರೆ.

"ರಿಲೀಸ್ ತಡವಾಗಿದ್ದೇಕೆ? ಎಂಬುದನ್ನು ವಿವರಿಸಲು ಮುಂದಾದ ರಂಜಿತ್​, ನಿಮಗೆ ಈ ವಿಷಯ ಹೇಗೆ ಹೇಳಬೇಕೋ ನನಗೆ ತಿಳಿಯುತ್ತಿಲ್ಲ. ಅದಕ್ಕೆ ಫೋನ್ ಮಾಡಲಿಲ್ಲ. ಈ ವಿಷಯ ಹೇಳುವುದು ನನಗೆ ಸ್ವಲ್ಪ ಕಷ್ಟವಾಗ್ತಿದೆ. ಶೋಭಾನ ಅವರು ಕೊನೆ ಸಮಯದಲ್ಲಿ ನಾನೇ ನನ್ನ ಪಾತ್ರಕ್ಕೆ ಡಬ್ ಮಾಡ್ತೀನಿ ಎಂದರು. ಇಲ್ಲ ಎಂದು ಹೇಳುವುದಾದರೆ, ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುವುದಿಲ್ಲ ಅಂತ ಹೇಳಿದ್ದಾರೆ ಎಂದರು. ಇದಕ್ಕೆ, ನೀವು ನನ್ನ ಧ್ವನಿಯನ್ನು ಕೈಬಿಟ್ಟಿದ್ದರ ಬಗ್ಗೆ ನನಗೆ ಬೇಸರವಿಲ್ಲ. ಆದರೆ, ಮುಂಚಿತವಾಗಿ ಒಂದು ಮಾತು ಹೇಳುವುದು ಸೌಜನ್ಯವಲ್ಲವೇ" ಎಂದು ಕೇಳಿದೆ.

"ರಿಲೀಸ್​ ಸಮಯದಲ್ಲಿ ಈ ವಿಚಾರವನ್ನು ದೊಡ್ಡದು ಮಾಡಲು ನನಗೆ ಇಷ್ಟವಿರಲಿಲ್ಲ. ಮುಖ್ಯವಾಗಿ, ಹಲವು ವರ್ಷಗಳಿಂದ ಇದೇ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದೀನಿ. ಕಳೆದ 50 ವರ್ಷಗಳಿಂದ ಮಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದೇನೆ. ನನ್ನ ಧ್ವನಿ ಕೈಬಿಡುವ ಅಥವಾ ಉಪಯೋಗಿಸಿಕೊಳ್ಳುವ ಕುರಿತು ನಮಗೂ ಒಂದು ಮಾಹಿತಿ ತಲುಪಿಸಬಹುದು ಅಲ್ವಾ? ಯಾಕೆ ಡಬ್ಬಿಂಗ್ ಆರ್ಟಿಸ್ಟ್​ಗಳು ಅಂದರೆ ಅಷ್ಟೊಂದು ಕೇವಲವೇ" ಎಂದು ಬೇಸರ ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net