ಮೊಟ್ಟಮೊದಲ ಬಾರಿಗೆ ವಿದೇಶಿ ನೆಲದಲ್ಲಿ ನಡೆಯಲಿದೆ ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆ?

ipl web
Published on

ಬೆಂಗಳೂರು: ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆಯನ್ನು ಮೊಟ್ಟಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಡಿಸೆಂಬರ್​ 15ರಿಂದ 19ರ ನಡುವೆ ಯಾವುದಾದರು ಒಂದು ದಿನ ಯುಎಇಯ ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಸುವ ಬಗ್ಗೆ ಚರ್ಚೆಗಳು ನಡೆದಿವೆ. ಈ ನಡುವೆ, ಬೆಂಗಳೂರು ಮತ್ತು ಮುಂಬೈ ಕೂಡ ಹರಾಜು ಪ್ರಕ್ರಿಯೆಗೆ ಆತಿಥ್ಯ ವಹಿಸುವ ರೇಸ್​ನಲ್ಲಿವೆ ಎನ್ನಲಾಗಿದೆ.

ಐಪಿಎಲ್​ನಲ್ಲಿ ಈಗ 10 ತಂಡಗಳಿದ್ದು, ಪ್ರತಿ ತಂಡದ ಸದಸ್ಯರನ್ನು ಸೇರಿಸಿದರೆ ನೂರಾರು ಮಂದಿಗೆ ಪಂಚತಾರಾ ಹೋಟೆಲ್​ ವ್ಯವಸ್ಥೆ ಮಾಡಬೇಕಾಗುತ್ತದೆ. ಜತೆಗೆ ಬಿಸಿಸಿಐ ಅಧಿಕಾರಿಗಳು, ಹರಾಜು ಪ್ರಕ್ರಿಯೆ ನಡೆಸಿಕೊಡುವ ತಂಡ, ಪ್ರಸಾರ ಸಿಬ್ಬಂದಿಗೂ ಹೋಟೆಲ್​ ವ್ಯವಸ್ಥೆ ಮಾಡಬೇಕಾಗುತ್ತದೆ. ಹೀಗಾಗಿ ಇಂಥ ವ್ಯವಸ್ಥೆ ಸುಲಭವಾಗಿ ಲಭ್ಯವಾಗುವ ದುಬೈ, ಹರಾಜು ಪ್ರಕ್ರಿಯೆ ಆಯೋಜನೆಗೆ ನೆಚ್ಚಿನ ತಾಣವಾಗಿ ಗುರುತಿಸಲ್ಪಟ್ಟಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಡಿಸೆಂಬರ್​ 18 ಅಥವಾ 19ರಂದು ಐಪಿಎಲ್​ ಆಟಗಾರರ ಹರಾಜು ನಡೆಯುವ ನಿರೀಕ್ಷೆ ಇದ್ದು, ಅದಕ್ಕೆ ಮುನ್ನ ಡಿಸೆಂಬರ್​ 9ರಂದು ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) ಆಟಗಾರ್ತಿಯರ ಹರಾಜು ಪ್ರಕ್ರಿಯೆ ಆಯೋಜನೆಗೊಳ್ಳಲಿದೆ ಎನ್ನಲಾಗಿದೆ. ಡಬ್ಲ್ಯುಪಿಎಲ್​ ಹರಾಜು ಪ್ರಕ್ರಿಯೆಯ ತಾಣ ಇನ್ನೂ ಅಂತಿಮಗೊಂಡಿಲ್ಲ. ಆದರೆ ಅದು ಭಾರತದಲ್ಲೇ ನಡೆಯಲಿದೆ. ಫೆಬ್ರವರಿಯಲ್ಲಿ 2ನೇ ಆವೃತ್ತಿಯ ಡಬ್ಲ್ಯುಪಿಎಲ್​ ನಡೆಯುವ ನಿರೀಕ್ಷೆ ಇದೆ.

ಸದ್ಯ ಆಟಗಾರರ ವಿನಿಮಯ ಪ್ರಕ್ರಿಯೆಗೆ ಐಪಿಎಲ್​ ತಂಡಗಳಿಗೆ ಬಿಸಿಸಿಐ ಅವಕಾಶ ಕಲ್ಪಿಸಿದೆ. ಬಳಿಕ ಆಟಗಾರರನ್ನು ತಂಡಗಳಿಂದ ರಿಲೀಸ್​ ಮಾಡಲು ಅವಕಾಶ ನೀಡಲಿದೆ. ನಂತರದಲ್ಲಿ ಈ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net