DSP Wife : ಆಕೆ ಸರ್ಕಾರಿ ಅಧಿಕಾರಿಯ ಪತ್ನಿ. ನಾಲ್ಕು ಜನರಿಗೆ ಮಾದರಿಯಾಗಬೇಕಾದ ಮಹಿಳೆ ಆಕೆ. ಆದರೆ, ತನ್ನ ಜವಾಬ್ದಾರಿಯನ್ನು ಮರೆತು ಅತಿಯಾಗಿ ವರ್ತಿಸುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಓರ್ವ ಡಿಎಸ್‌ಪಿ ಪತ್ನಿಯಾಗಿ ತನ್ನ ಹುಟ್ಟುಹಬ್ಬ ಆಚರಣೆ ವೇಳೆ ಸರ್ಕಾರಿ ವಾಹನದ ಬಾನೆಟ್ ಮೇಲೆ ಕುಳಿತು ಕೇಕ್ ಕತ್ತರಿಸುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ತಮ್ಮ ವೈಯಕ್ತಿಕ ಅಗತ್ಯಗಳಿಗಾಗಿ ಸರ್ಕಾರಿ ವಾಹನಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಇತ್ತೀಚೆಗೆ ಛತ್ತೀಸ್‌ಗಢದ ಜಂಜ್‌ಗೀರ್-ಚಂಪಾ ಜಿಲ್ಲೆಯ ಡಿಎಸ್‌ಪಿ ತಸ್ಲೀಮ್ ಆರಿಫ್ ಅವರ ಪತ್ನಿ ಫರ್ಹೀನ್ ಖಾನ್ ತಮ್ಮ ಹುಟ್ಟುಹಬ್ಬದ ಆಚರಣೆಗೆ ಸರ್ಕಾರಿ ವಾಹನವನ್ನು ಬಳಸುವುದರ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.
ವಿಡಿಯೋದಲ್ಲಿ ಏನಿದೆ?
ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ, ಫರ್ಹೀನ್ ಖಾನ್ ಅವರು ಪೊಲೀಸ್ ಇಲಾಖೆಯ ವಾಹನದ ಬಾನೆಟ್ ಮೇಲೆ ಕುಳಿತು ಕೇಕ್ ಕತ್ತರಿಸಿದ್ದಾರೆ. ಫರ್ಹೀನ್ ಅವರು ವಾಹನದ ಮುಂಭಾಗದ ಗ್ಲಾಸ್ ಮೇಲೆ “ಸ್ನೋ ಸ್ಪ್ರೇ” ಬಳಸಿ, “32” ಎಂದು ಬರೆಯುತ್ತಾರೆ. ಇದಾದ ನಂತರ, ಚಾಲಕನ ಸೀಟಿನಲ್ಲಿದ್ದ ಮತ್ತೊಬ್ಬ ಮಹಿಳೆ ವೈಪರ್‌ಗಳಿಂದ ಅದನ್ನು ಒರೆಸಿದಾಗ, ಫರ್ಹೀನ್ ಅವರು ಮತ್ತೆ “33” ಎಂದು ಬರೆಯುತ್ತಾರೆ. ಇದೇ ವೇಳೆ ಕಾರಿನ ಬಾನೆಟ್ ಮೇಲೆ ಕೇಕ್ ಮತ್ತು ಹೂಗುಚ್ಛವನ್ನು ಸಹ ಇರಿಸಲಾಗಿತ್ತು. ಬಳಿಕ ಕಾರಿನ ಎರಡೂ ಬಾಗಿಲು ಹಾಗೂ ಹಿಂಭಾಗದ ಡಿಕ್ಕಿ ಮತ್ತು ಮೇಲೆ ರೂಫ್ ಓಪನ್ ಮಾಡಿ ಕಾರನ್ನು ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾರೆ. ಈ ವೇಳೆ ಫರ್ಹೀನ್ ಅವರು ಕಾರಿನ ಬಾನೆಟ್ ಮೇಲೆ ಕುಳಿತಿರುತ್ತಾರೆ. ಇದಿಷ್ಟು ದೃಶ್ಯ ವೈರಲ್ ಆಗಿರುವ ವಿಡಿಯೋದಲ್ಲಿದೆ.
ಈ ವಿಡಿಯೋವನ್ನು ರೆಸಾರ್ಟ್ ಒಂದರಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಅಧಿಕಾರಿಯ ಪತ್ನಿ ತಮ್ಮ ಹುಟ್ಟುಹಬ್ಬದ ಆಚರಣೆಗೆ ಸರ್ಕಾರಿ ವಾಹನ ಬಳಸಿರುವುದು ಇದೀಗ ಚರ್ಚೆಯ ವಿಷಯವಾಗಿದೆ. ನಿಯಮಗಳ ಪ್ರಕಾರ, ಅಧಿಕೃತ ವಾಹನಗಳನ್ನು ಸರ್ಕಾರಿ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು. ವೈಯಕ್ತಿಕ ಆಚರಣೆಗಳಿಗೆ ಅಂತಹ ವಾಹನಗಳನ್ನು ಬಳಸುವುದು ನಿಯಮಗಳಿಗೆ ವಿರುದ್ಧವಾಗಿದೆ. ವಿಶೇಷವಾಗಿ, ನೀಲಿ ದೀಪದಂತಹ ಅಧಿಕೃತ ಗುರುತಿನ ಗುರುತುಗಳನ್ನು ಹೊಂದಿರುವ ವಾಹನಗಳನ್ನು ಬಳಸುವುದು ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ಅನೇಕ ನೆಟ್ಟಿಗರು ಫರ್ಹೀನ್ ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.
DSP की पत्नी ने नीली बत्ती वाली कार के बोनट पर बैठकर मनाया बर्थडे, वायरल हुआ वीडियो
छत्तीसगढ़ के बलरामपुर जिले में पुलिस बटालियन में तैनाच डीएसपी तस्लीम आरिफ की पत्नी नीली बत्ती लगी सरकारी कार के बोनट पर बैठकर अपना बर्थडे मना रही है. यह वीडियो सोशल मीडिया पर खूब वायरल हो रहा… pic.twitter.com/iarwZ1j71f
— NDTV MP Chhattisgarh (@NDTVMPCG) June 13, 2025
ಈ ಘಟನೆಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಅನೇಕ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಆದರೆ, ಇದಕ್ಕೆ ಸಂಬಂಧಪಟ್ಟ ಡಿಎಸ್‌ಪಿ ವಿರುದ್ಧ ಇಲ್ಲಿಯವರೆಗೆ ಯಾವುದೇ ಅಧಿಕೃತ ಕ್ರಮ ಕೈಗೊಂಡಿಲ್ಲ ಎಂಬುದು ಗಮನಾರ್ಹ ಸಂಗತಿ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)
ಈ ಮೂರು ರಾಶಿಯವರು ನಿಮ್ಮ ಬಳಿಯಿದ್ದರೆ ಅಲ್ಲಿ ನಗುವಿಗೆ ಯಾವುದೇ ಕೊರತೆ ಇರುವುದಿಲ್ಲ! Zodiac Signs
ವಿಮಾನ ಪತನ ಸ್ಥಳಕ್ಕೆ ಪ್ರಧಾನಿ ಭೇಟಿ: ಬದುಕುಳಿದ ಏಕೈಕ ಪ್ರಯಾಣಿಕನ ಆರೋಗ್ಯ ವಿಚಾರಿಸಿದ ಮೋದಿ! PM Modi