

ಬೆಂಗಳೂರು: ಡ್ರಗ್ಸ್ ಜಾಲದ ಕಿಂಗ್ಪಿನ್ ಅನಿಕಾ ಎನ್ಸಿಬಿ ಬಲೆಗೆ ಬೀಳುತ್ತಿದ್ದಂತೆ ಸ್ಫೋಟಕ ರಹಸ್ಯ ಹೊರಬಿದ್ದಿದೆ. ಡ್ರಗ್ಸ್ ದಂಧೆ ಹೇಗಿತ್ತು? ಕೋಡ್ವರ್ಡ್ ಏನು? ಕೂತಲ್ಲೇ ಹೇಗೆಲ್ಲ ವ್ಯವಹಾರ ಕುದುರಿಸುತ್ತಿದ್ದಳು? ಎಂಬುದರ ಬಗ್ಗೆ ಸ್ವತಃ ಎ1 ಆರೋಪಿ ಅನಿಕಾಳೇ ಬಾಯ್ಬಿಟ್ಟಿದ್ದಾಳೆ.
ವಿದ್ಯಾರ್ಥಿಗಳು, ಸ್ಯಾಂಡಲ್ವುಡ್ನ ಕೆಲ ನಟ-ನಟಿಯರು, ಮ್ಯೂಸಿಕ್ ಡೈರೆಕ್ಟರ್ಗಳನ್ನು ನೇರವಾಗಿ ಭೇಟಿ ಮಾಡದೆ ಕೂತಲ್ಲೇ ವ್ಯವಹಾರ ನಡೆಸುತ್ತಿದ್ದಳು. ಇವರಿಗೆಲ್ಲ ಡ್ರಗ್ಸ್ ಸಪ್ಲೈ ಮಾಡಲು ಅನಿಕಾಗೆ ಸಾಥ್ ಕೊಟ್ಟದ್ದು ಕೊಚ್ಚಿ ಮೂಲದ ಅನೂಪ್ ಮತ್ತು ಚೆನ್ನೈನ ರಿಜೇಶ್ ರವಿಚಂದ್ರನ್, ಇವರಿಬ್ಬರೂ ಅನಿಕಾಳಿಂದ ಪಡೆದ ಡ್ರಗ್ಸ್ ಅನ್ನು ಸಾಫ್ಟ್ ಟಾಯ್ಸ್ (ಬಟ್ಟೆಯ ಬೊಂಬೆಗಳು)ನಲ್ಲಿ ಇಟ್ಟು ಕೋರಿಯರ್ ಮೂಲಕ ಕಳುಹಿಸುತ್ತಿದ್ದರು. ಇದರ ಜತಗೆ ನೇರವಾಗಿ ಪಾರ್ಟಿಗಳಿಗೆ ಮತ್ತು ಕೆಲವರ ಪಿಓ ಬಾಕ್ಸ್ಗಳಿಗೆ ಕಳುಹಿಸುತ್ತಿದ್ದರು.
ಸದ್ಯ ಅನಿಕಾ ಜೊತೆ ನಗರದ ವಿವಿಧ ಮೂಲೆಯ 18 ಮಂದಿ ಪೆಡ್ಲರ್ಗಳ ಲಿಂಕ್ ಇರುವುದು ತನಿಖೆಯಲ್ಲಿ ಗೊತ್ತಾಗಿದೆ. ಅನಿಕಾಳ ಶಿಷ್ಯರಾಗಿ ರಿಜೇಶ್ ಮತ್ತು ಅನೂಪ್ ಕೆಲಸ ಮಾಡುತ್ತಿದ್ದರು. ಇವರ ಜೊತೆಗಿದ್ದ ಇನ್ನೊಬ್ಬ ಪೆಡ್ಲರ್ ಡುಗಯ್ ಡುಂಜೋ ಎಂಬಾತ ತಲೆಮರೆಸಿಕೊಂಡಿದ್ದಾನೆ.