ಮೈಸೂರಿನ ಕಾಲೇಜುಗಳಲ್ಲಿ ಡ್ರಗ್ಸ್​ ದಂಧೆ; ಪ್ರಮೋದ್​ ಮುತಾಲಿಕ್​ ಗಂಭೀರ ಆರೋಪ

8 Dwd 2 (Pramod Mutalik)
Published on

ಮೈಸೂರು: ಡ್ರಗ್ಸ್​ ಮಾಫಿಯಾ ಕುರಿತು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ ಸ್ಫೋಟಕ ಹೇಳಿಕೆ ನೀಡಿದ್ದು, ರಾಜ್ಯದ ಜನತೆಯನ್ನೇ ಬಿಚ್ಚಿಬೀಳಿಸಿದೆ.

ರಾಜಕಾರಣಿಗಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ. ಅವರ ಮಕ್ಕಳೇ ಈ ಮಾಫಿಯಾದಲ್ಲಿ ಶಾಮೀಲಾಗಿದ್ದಾರೆ. ಹಾಗಾಗಿ ರಾಜಕಾರಣಿಗಳೇ ಪೊಲೀಸರ ಕೈಕಟ್ಟಿ ಹಾಕಿದ್ದಾರೆ ಎಂದು ಆರೋಪಿಸಿದ ಪ್ರಮೋದ್​ ಮುತಾಲಿಕ್​, ಮೈಸೂರಿನ ಹಲವು ಕಾಲೇಜಿನಲ್ಲಿ ಡ್ರಗ್ಸ್​ ಜಾಲ ಇದೆ ಎಂದು ಗಂಭೀರ ಆರೋಪ ಮಾಡಿದರು. ಈಗಲೂ ಕಾಲೇಜು ಹಾಸ್ಟೆಲ್‌ಗಳ ಮೇಲೆ ದಾಳಿ ಮಾಡಲಿ. ನಾನು ಚಾಲೆಂಜ್ ಮಾಡುತ್ತೇನೆ. ಹಾಸ್ಟೆಲ್‌ಗಳನ್ನು ಚೆಕ್ ಮಾಡಿದರೆ ಡ್ರಗ್ಸ್, ಹೆರಾಯಿನ್ ಎಲ್ಲವೂ ಸಿಗುತ್ತವೆ ಎಂದು ಸವಾಲು ಹಾಕಿದರು.

ಮೈಸೂರಿನ ಮಹಾಜನ ಕಾಲೇಜು, ಜೆಎಸ್‌ಎಸ್ ದಂತ ಕಾಲೇಜು, ಜೆಎಸ್‌ಎಸ್ ವೈದ್ಯಕೀಯ, ಸಂತ ಫಿಲೋಮಿನಾ ಕಾಲೇಜುಗಳಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಈ ಬಗ್ಗೆ ಪೋಷಕರು- ಶಿಕ್ಷಕರಿಗೆ ಗೊತ್ತಿದೆ. ಆದರೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಹೊರ ದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಕಾಲೇಜು ಸೇರುತ್ತಾರೆ. ಈಗಲೂ ಹಾಸ್ಟೆಲ್‌ಗಳ ಮೇಲೆ ದಾಳಿ ಮಾಡಲಿ. ಅಲ್ಲಿ ಡ್ರಗ್ಸ್ ಸಿಗುತ್ತದೆ ಎಂದು ಪ್ರಮೋದ್​ ಮುತಾಲಿಕ್​ ಆರೋಪಿಸಿದರು.

ಶಾಲಾ ಕಾಲೇಜುಗಳ ಆವರಣದಲ್ಲಿ ಡ್ರಗ್ಸ್ ಸಿಗುತ್ತಿದೆ. ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದ ಮುತಾಲಿಕ್, ಇಂದಿನಿಂದಲೇ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.

ಲವ್ ಜಿಹಾದ್ ಮಾದರಿಯಲ್ಲಿಯೇ ಡ್ರಗ್ಸ್ ಜಿಹಾದ್ ನಡೆಯುತ್ತಿದೆ. ಇದು ದೇಶಾದ್ಯಂತ ವ್ಯಾಪಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದರ ಮೂಲ ರೂವಾರಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದವರೂ ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಹೊಂದಾಣಿಕೆ ರಾಜಕಾರಣದ ಮೂಲಕ‌ ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಆಕ್ರೋಶ ಹೊರಹಾಕಿದ ಮುತಾಲಿಕ್​, ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಬಗ್ಗೆ ಗಮನ ಸೆಳೆದಿದ್ದ ನನ್ನನ್ನೇ ಟಾರ್ಗೆಟ್ ಮಾಡಿದರು. ಆಗಲೇ ಇದನ್ನು ಮಟ್ಟ ಹಾಕಿದ್ದರೆ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net