

ಬೆಂಗಳೂರು: ಶೇಷಾದ್ರಿಪುರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೋಳಿಶೆಡ್ನ ಅಂಡರ್ಗ್ರೌಂಡ್ನಲ್ಲಿ ಬಚ್ಚಿಟ್ಟಿದ್ದ ಬರೋಬ್ಬರಿ 1,352 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ರಾಜ್ಯದ ಇತಿಹಾಸದಲ್ಲೇ ಇದು ಬಹುದೊಡ್ಡ ಬೇಟೆ ಎನ್ನಲಾಗುತ್ತಿದ್ದು, ಇಡೀ ರಾಜ್ಯಕ್ಕೆ ಈ ಕೋಳಿಶೆಡ್ನಿಂದಲೇ ಗಾಂಜಾ ಸರಬರಾಜು ಆಗುತ್ತಿತ್ತು ಎಂಬ ಆತಂಕಕಾರಿ ವಿಷಯವೂ ಬಯಲಾಗಿದೆ.
1,352ಕ್ಕೂ ಹೆಚ್ಚು ಕೆಜಿ ಗಾಂಜಾ ಸಿಕ್ಕಿದ್ದು ಕಲಬುರಗಿಯ ಲಕ್ಷ್ಮಣ್ ನಾಯಕ್ ತಾಂಡಾದಲ್ಲಿನ ಕೋಳಿಶಡ್ನಲ್ಲಿ. ಒಡಿಶಾ ಮೂಲಕ ಕಲಬುರಗಿಗೆ ಗಾಂಜಾ ಸರಬರಾಜು ಆಗುತ್ತಿತ್ತು.
ಡ್ರಗ್ಸ್ ವಿರುದ್ಧ ಸಮರದಲ್ಲಿ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು ಬೆಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಆಟೋ ಚಾಲಕನ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡಿದ್ದ ಕೇಂದ್ರ ವಿಭಾಗದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, 13 ಕ್ವಿಂಟಾಲ್ ಗಾಂಜಾ ಪತ್ತೆಹಚ್ಚಿದ್ದಾರೆ.
ಬೆಂಗಳೂರಿನ ಗಾಯತ್ರಿನಗರದ ಆಟೋಚಾಲಕ ಜ್ಞಾನಶೇಖರ್, ವಿಜಯಪುರದ ಸಿದ್ದುನಾಥ್, ಬೀದರ್ ಮೂಲದ ನಾಗನಾಥ್, ಕಲಬುರಗಿಯ ಚಂದ್ರಕಾಂತ್ ಬಂಧಿತರು.
ಖಚಿತ ಮಾಹಿತಿ ಮೇರೆಗೆ ಕಲಬುರಗಿಯ ಕೋಳಿಶಡ್ ಮೇಲೆ ದಾಳಿ ನಡೆಸಿದಾಗ ಸುಮಾರು 6 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ.