

ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟಿರುವ ವ್ಯಾಪಕ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಎನ್ಸಿಬಿ ಅಧಿಕಾರಿಗಳು ಮುಂಬೈ ಮತ್ತು ದೆಹಲಿಯಲ್ಲಿ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಒಬ್ಬ ಡ್ರಗ್ ಪೆಡ್ಲರ್ನನ್ನು ಬಂಧಿಸಿದ್ದು, ವಿದೇಶದಿಂದ ಬರುತ್ತಿದ್ದ ಡ್ರಗ್ಸ್ ಬೆಂಗಳೂರಿನ (ಪೇಜ್ 3) ಸೆಲೆಬ್ರಿಟಿಗಳಿಗೆ ಪೂರೈಕೆಯಾಗುತ್ತಿತ್ತು ಎಂಬ ಸ್ಪೋಟಕ ಸಂಗತಿ ವಿಚಾರಣೆಯಲ್ಲಿ ಬಯಲಾಗಿದೆ.
ಯುಎಸ್ಎ ಮತ್ತು ಕೆನಡಾದಿಂದ ಕಳ್ಳ ಸಾಗಣೆಯಾಗಿದ್ದ 3.5 ಕೆ.ಜಿ ಗಾಂಜಾ (ಕ್ಯುರೇಟೆಡ್ ಮರಿಜುವಾನಾ)ವನ್ನು ಜಪ್ತಿ ಮಾಡಲಾಗಿದೆ. ಈ ಗಾಂಜಾಗೆ ಮುಂಬೈನಲ್ಲಿ ಭಾರಿ ಪ್ರಮಾಣದಲ್ಲಿ ಬೇಡಿಕೆ ಇದೆ. ಖಚಿತ ಮಾಹಿತಿ ಮೇರೆಗೆ ವಿದೇಶಿ ಅಂಚೆ ಕಚೇರಿಗಳಲ್ಲಿ ಮಾಲನ್ನು ಜಪ್ತಿ ಮಾಡಲಾಗಿದೆ. ಡಾರ್ಕ್ನೆಟ್ ವೆಬ್ಸೈಟ್ ಮೂಲಕ ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ಖರೀದಿಸಲಾಗಿದೆ ಎಂದು ಎನ್ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋವಾದ ಎಫ್. ಅಹಮದ್ ಎಂಬಾತನನ್ನು ಬಂಧಿಸಲಾಗಿದೆ. ಈತ ಗೋವಾದ ರೆಸಾರ್ಟ್ವೊಂದರಲ್ಲಿ ಕಾರು ಚಾಲಕನಾಗಿದ್ದಾನೆ. ಈತ ಬೆಂಗಳೂರಿನಲ್ಲಿರುವ ಡ್ರಗ್ ಪೆಡ್ಲರ್ಗೆ ಮಾದಕ ದ್ರವ್ಯ ಪೂರೈಸುತ್ತಿದ್ದ. ಅಹಮದ್ನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಪೆಡ್ಲರ್ಗೆ ಬೆಂಗಳೂರಿನಲ್ಲಿರುವ ಹಲವು ಸೆಲೆಬ್ರೆಟಿಗಳ ಸಂಪರ್ಕವಿರುವುದು ಗೊತ್ತಾಗಿದೆ. ಆತ ಅವರಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಎಂಬ ವಿಚಾರ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈನಲ್ಲಿ ಹೆಚ್ಚು ಬೇಡಿಕೆ ಇದ್ದು, ಒಂದು ಗ್ರಾಂ ಗಾಂಜಾ 5 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. 3.50 ಕೆ.ಜಿ ಗಾಂಜಾದ ಮೌಲ್ಯ 1.75 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುತ್ತದೆ ಎಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಬಿಗೆ ಯಾವುದೇ ಸಾಕ್ಷ್ಯ ಕೊಡದ ಇಂದ್ರಜಿತ್ ಲಂಕೇಶ್
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಕುರಿತು ಮಾಹಿತಿ ಸ್ಪೋಟಿಸುವುದಾಗಿ ಹೇಳುತ್ತಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸಿಸಿಬಿಗೆ ಯಾವುದೇ ಪುರಾವೆ ನೀಡಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಆರೋಪಗಳಿಗೆ ಸೂಕ್ತ ಪುರಾವೆಗಳ ಸಮೇತ ಹಾಜರಾಗುವಂತೆ ಇಂದ್ರಜಿತ್ಗೆ ಮತ್ತೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ನನಗೆ ರೈಸ್-ದಾಲ್ ಗೊತ್ತು, ಡ್ರಗ್ಸ್ ಬಗ್ಗೆ ಗೊತ್ತಿಲ್ಲ. 24 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ, ಡ್ರಗ್ ಮಾಫಿಯಾ ಬಗ್ಗೆ ಮಾಹಿತಿ ಇಲ್ಲ. ಇಂಥ ವಿಚಾರಕ್ಕೆ ಇಡೀ ಚಿತ್ರರಂಗಕ್ಕೆ ಕಳಂಕ ತರುವುದು ಸರಿಯಲ್ಲ. | ಸುದೀಪ್ ಚಿತ್ರನಟ