

ಬೆಂಗಳೂರು: ಚಾಮರಾಜಪೇಟೆ ಪೊಲೀಸ್ ಠಾಣೆಯ ಡ್ರಗ್ಸ್ ಕೇಸ್ ಸಂಬಂಧ ಸಿಸಿಬಿ ಪೊಲೀಸರು ಕಿರುತೆರೆಯ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸಿಸಿಬಿ ಕಚೇರಿಗೆ ಹಾಜರಾಗಬೇಕಿದೆ.
ಸದ್ಯ ತೆಲಂಗಾಣದ ಹೈದ್ರಾಬಾದ್ನಲ್ಲಿರುವ ಅಕುಲ್ ಬಾಲಾಜಿ, ಸಿಸಿಬಿ ನೋಟಿಸ್ ವಿಚಾರವಾಗಿ 'ದಿಗ್ವಿಜಯ ನ್ಯೂಸ್' ಜೊತೆ ಮಾತನಾಡಿದರು. 'ಹೌದು, ನನಗೆ ಸಿಸಿಬಿ ನೋಟಿಸ್ ವಾಟ್ಸ್ಆ್ಯಪ್ ಮುಖಾಂತರ ತಲುಪಿದೆ. ನಾನು ವಿಚಾರಣೆಗೆ ನಾಳೆ ಹಾಜರ್ ಆಗ್ತೀನಿ. ಆದ್ರೆ ಅವರು ಯಾವ ವಿಚಾರಕ್ಕೆ ನೋಟಿಸ್ ಕೊಟ್ಟಿದ್ದಾರೆ ಎಂಬುದು ಗೊತ್ತಾಗಿಲ್ಲ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವೆ' ಎಂದರು. ಇದನ್ನೂ ಓದಿರಿ ಡ್ರಗ್ಸ್ ಕೇಸ್; ಅಕುಲ್ ಬಾಲಾಜಿ, ಪ್ರಭಾವಿ ರಾಜಕಾರಣಿಯ ಪುತ್ರ ಸೇರಿ ಮೂವರಿಗೆ ಸಿಸಿಬಿ ನೋಟಿಸ್
'ಸಿಸಿಬಿ ಕಚೇರಿಗೆ ಖಂಡಿತ ಬರುವೆ' ಎಂದ ಅಕುಲ್ ಬಾಲಾಜಿ, 'ನಮಗೆ ಏನಮ್ಮ ಸಂಬಂಧ ಇದೆ, ನಾವೆಲ್ಲ ಅಂತಹ ಪಾರ್ಟಿಗಳಿಗೆ ಹೋಗೋರಲ್ಲ. ನೀವಾದರೂ ನಾನು ಎಲ್ಲಿಯಾದರೂ ಅಂತಹ ಪಾರ್ಟಿಗಳಿಗೆ ಹೋಗಿರುವುದನ್ನು ನೋಡಿದ್ದೀರಾ?' ಎಂದು ಮರುಪ್ರಶ್ನೆ ಮಾಡುವ ಮೂಲಕ ಡ್ರಗ್ಸ್ ಪೆಡ್ಲರ್ಗಳ ಜೊತೆ ತನಗೆ ಯಾವ ಲಿಂಕ್ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು.
ಇನ್ನು ಶುಕ್ರವಾರ ಒಂದೇ ದಿನ ಅಕುಲ್ ಬಾಲಾಜಿ ಜತೆಗೆ ಬಿಬಿಎಂಪಿ ಕಾರ್ಪೋರೇಟರ್ ಆರ್.ವಿ.ಯುವರಾಜ್ ಮತ್ತು 'ನೂರು ಜನ್ಮಕ್ಕೂ' ಸಿನಿಮಾ ನಟ ಸಂತೋಷ್ ಕುಮಾರ್ ಅವರಿಗೂ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಈ ಮೂವರು ಶನಿವಾರ ಬೆಳಗ್ಗೆ 10 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರ್ ಆಗಬೇಕಿದೆ.