

ಬೆಂಗಳೂರು: ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರತಿಮಾ(೪೫) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪ್ರತಿಮಾ ಅವರ ಮಾಜಿ ಕಾರು ಚಾಲಕನನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಣನಕುಂಟೆ ಸಮೀಪದ ಜಂಬು ಸವಾರಿ ದಿಣ್ಣೆ ನಿವಾಸಿ ಕಿರಣ್(೩೨) ಬಂಧಿತ ಆರೋಪಿ.
ಬಂಧಿತ ಆರೋಪಿಯು, ದೊಡ್ಡಕಲ್ಲಸಂದ್ರದ ಕುವೆಂಪುನಗರದಲ್ಲಿ ಒಂಟಿಯಾಗಿ ವಾಸವಾಗಿದ್ದ ಪ್ರತಿಮಾ ಅವರನ್ನು ನ. ೪ ರ ರಾತ್ರಿ ೮.೩೦ ರ ಸುಮಾರಿಗೆ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಚಾಮರಾಜನಗರ ಜಿಲ್ಲೆ ಮಹದೇಶ್ವರ ಬೆಟ್ಟದಲ್ಲಿದ್ದ ಆರೋಪಿಯನ್ನು ಬಂಧಿಸಲಾಯಿತು ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರವಾಡ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದಾರೆ.
ವಿಶೇಷ ತಂಡದಿಂದ ಕಾರ್ಯಾಚರಣೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಮಾ ಅವರ ಸಹೋದರ ಪ್ರತೀಶ್ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಸುಬ್ರಮಣ್ಯಪುರ ಉಪ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯನ್ನೊಳಗೊಂಡ ೩ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ವಿಶೇಷ ತಂಡಗಳು ಹಲವು ಆಯಾಮದಲ್ಲಿ ತನಿಖೆ ಕೈಗೊಂಡಿದ್ದವು. ಆರೋಪಿ ಕಿರಣ್ ಬಗ್ಗೆ ದೊರೆತ ಸುಳಿವನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಕೊಲೆಗೆ ಕಾರಣವೇನು?
ಆರೋಪಿ ಕಿರಣ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕಳೆದ ೮ ವರ್ಷಗಳಿಂದ ಗುತ್ತಿಗೆ ಆದಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ. ಪ್ರತಿಮಾ ಅವರಿಗೆ ಇಲಾಖೆ ವತಿಯಿಂದ ನೀಡಲಾಗಿದ್ದ ಕಾರಿಗೆ ಚಾಲಕನಾಗಿ ಕಳೆದ ೪ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ. ಅಶಿಸ್ತಿನ ಕಾರಣಕ್ಕಾಗಿ ಮತ್ತು ಇತ್ತೀಚೆಗೆ ಪ್ರತಿಮಾ ಅವರು ಕಾರಿನಲ್ಲಿದ್ದ ವೇಳೆ ಅಪಘಾತ ಎಸಗಿದ್ದ. ಹೀಗಾಗಿ ಎರಡು ತಿಂಗಳ ಹಿಂದೆ ಈತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದರಿಂದ ಪ್ರತಿಮಾ ವಿರುದ್ಧ ಆಕ್ರೋಶಗೊಂಡು ದ್ವೇಷ ಸಾಧಿಸುತ್ತಿದ್ದ. ಅ.೪ ರಾತ್ರಿ ಪ್ರತಿಮಾ ಅವರ ಮನೆಗೆ ತೆರಳಿ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಪರಿ ಪರಿಯಾಗಿ ಬೇಡಿಕೊಂಡಿದ್ದ. ಆದರೆ, ಪ್ರತಿಮಾ ಅವರು ಇದಕ್ಕೆ ಒಪ್ಪಿಕೊಳ್ಳಲಿಲ್ಲ ಇದರಿಂದ ಸಿಟ್ಟಿಗೆದ್ದ ಆರೋಪಿ ಪ್ರತಿಮಾ ಅವರ ಕುತ್ತಿಗೆಯಲ್ಲಿದ್ದ ವೇಲಿನಿಂದ ಅವರ ಉಸಿರುಗಟ್ಟಿಸಿ ಕೊಂದು ಬಳಿಕ ಮಲಗುವ ಕೋಣೆಗೆ ಎಳೆದೊಯ್ದು ಮನೆಯಲ್ಲಿದ್ದ ಚಾಕುವಿಂದ ಆಕೆಯ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ.
ಆರೋಪಿ ಸಿಕ್ಕಿ ಬಿದ್ದಿದ್ದೇಗೆ?
ಪ್ರತಿಮಾ ಅವರನ್ನು ಹತ್ಯೆ ಮಾಡಿದ ಬಳಿಕ ಮನೆಯಲ್ಲಿದ್ದ ೧೫ ಸಾವಿರ ರೂ.ಹಣವನ್ನು ತೆಗೆದುಕೊಂಡು ಹೋಗಿದ್ದ. ಬಳಿಕ ರಾತ್ರಿ ಮದ್ಯದ ಪಾರ್ಟಿ ಮಾಡಿದ್ದ. ನಂತರ ಸ್ನೇಹಿತರ ಬಳಿ ೧೦ ಸಾವಿರ ರೂ. ಸಾಲ ಪಡೆದು ಒಟ್ಟು ೨೫ ಸಾವಿರ ರೂ. ಹಣವನ್ನು ತನ್ನ ಬಳಿ ಇಟ್ಟುಕೊಂಡು ತನ್ನ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ. ಆದರೆ ಸ್ನೇಹಿತರಿಗೆ ಕೊಲೆಯ ವಿಚಾರ ತಿಳಿಸಿರಲಿಲ್ಲ. ಕೌಟುಂಬಿಕ, ವೈಯಕ್ತಿಕ ಮತ್ತು ವೃತ್ತಿಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದ ವಿಶೇಷ ತಂಡಕ್ಕೆ ಕಿರಣ್ ಬಗ್ಗೆ ಮಾಹಿತಿ ಸಿಗುತ್ತದೆ. ಬಳಿಕ ಕಿರಣ್ ಮೇಲೆ ಅನುಮಾನಗೊಂಡು ಆತನ ಮೊಬೈಲ್‌ಗೆ ಕರೆ ಮಾಡಿದ್ದಾಗ ಆತನ ಮೊಬೈಲ್ ಸ್ವಿಚ್ ಬಂದಿದೆ. ಬಳಿಕ ಆತನ ಸ್ನೇಹಿತರನ್ನು ವಿಚಾರಣೆ ನಡೆಸಿದ್ದಾಗ ಆತ ಮಹದೇಶ್ವರ ಬೆಟ್ಟಕ್ಕೆ ತೆರಳಿರುವ ಮಾಹಿತಿ ದೊರಕುತ್ತದೆ. ಕೂಡಲೇ ಅಲರ್ಟ್ ಆದ ಪೊಲೀಸರು ಚಾಮರಾಜನಗರ ಪೊಲೀಸರ ಸಹಾಯ ಪಡೆದು ಕಾರ್ಯಾಚರಣೆ ನಡೆಸಿ ಮಹದೇಶ್ವರದ ಬೆಟ್ಟದಲ್ಲಿ ದೇವರ ದರ್ಶನ ಪಡೆದು ಹೊರ ಬಂದ ಆರೋಪಿಯನ್ನು ೪.೩೦ ರ ಸಮಯದಲ್ಲಿ ವಶಕ್ಕೆ ಪಡೆದು ಕರೆ ತಂದು ವಿಚಾರಣೆ ನಡೆಸಿದ್ದಾರೆ.