

ಬೆಂಗಳೂರು: ಕರೊನಾ ಹಾವಳಿ ಜತೆ ಜತೆಗೆ ಇದೀಗ ರಾಜ್ಯ ಸರ್ಕಾರಕ್ಕೆ ಕುಡಿಯುವ ನೀರಿನ ಚಿಂತೆ ಆವರಿಸಿದೆ. ರಾಜ್ಯದಲ್ಲಿ ಈಗಾಗಲೇ ಬೇಸಿಗೆ ಆರಂಭವಾಗಿದ್ದು ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಮುಂದಿನ ತಿಂಗಳು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಲಕ್ಷಣ ಕಂಡುಬಂದಿದೆ. ಕಳೆದ ಸಾಲಿಗೆ ಹೋಲಿಸಿದರೆ, ಕೆಲವು ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಲ್ಲ. ಆದರೂ ಪರಿಸ್ಥಿತಿ ನಿಧಾನವಾಗಿ ವ್ಯಾಪಿಸಿಕೊಳ್ಳುತ್ತಿದೆ. ಇದು ಶಾಸಕರು, ಸಚಿವರ ಗಮನಕ್ಕೂ ಬಂದಿದ್ದು ಈ ಸಮಸ್ಯೆ ಪರಿಹರಿಸುವ ಸವಾಲು ಎದುರಾಗಿದೆ.
ಲೆಕ್ಕ ವ್ಯತ್ಯಾಸ!: ಪ್ರಸ್ತುತ ಸರ್ಕಾರದ ಬಳಿ ಇರುವ ಮಾಹಿತಿಗೂ, ಶಾಸಕರು-ಸಚಿವರ ಮಾಹಿತಿಗೂ ಸಾಕಷ್ಟು ವ್ಯತ್ಯಾಸವಿದೆ. ವಿಧಾನಮಂಡಲ ಅಧಿವೇಶನ ಸಂದರ್ಭ ಹಲವು ಶಾಸಕರು ತಮ್ಮ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ರ್ಚಚಿಸಲು, ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರ ಬಳಿ ರ್ಚಚಿಸಿ ಹಣ ಬಿಡುಗಡೆಗೆ ಒತ್ತಾಯಿಸಿದ್ದರು. ಅಲ್ಲದೆ, ಈಚೇಗೆ ನಡೆದ ಸಂಪುಟ ಸಭೆ ಬಳಿಕ ಚಿಕ್ಕಬಳ್ಳಾಪುರ ಕ್ಷೇತ್ರದ ನೀರಿನ ತೀವ್ರ ಸಮಸ್ಯೆ ಬಗ್ಗೆ ಸಚಿವ ಡಾ.ಸುಧಾಕರ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಜತೆಗೆ ಕಳವಳ ವ್ಯಕ್ತಪಡಿಸಿ ತುರ್ತಾಗಿ ನೆರವಾಗಲೇಬೇಕು ಎಂದು ಗೋಗರೆದಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ, ಈಗಾಗಲೇ ಕುಡಿಯುವ ನೀರು ಸಮಸ್ಯೆ ಇರುವ 9 ಜಿಲ್ಲೆಗಳ 59 ಗ್ರಾಮಗಳಿಗೆ ಒಟ್ಟು 65 ಟ್ಯಾಂಕರ್ಗಳ ಮೂಲಕ ಪ್ರತಿದಿನ 162 ಟ್ರಿಪ್ನಲ್ಲಿ ಪೂರೈಸಲಾಗುತ್ತಿದೆ ಹಾಗೂ 215 ಗ್ರಾಮಗಳಿಗೆ 237 ಖಾಸಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರನ್ನು ಜಿಲ್ಲಾಡಳಿಗಳಿಂದ ಪೂರೈಸಲಾಗುತ್ತದೆ ಎಂಬುದು ಗ್ರಾಮೀಣಾಭಿವೃದ್ಧಿ ಇಲಾಖೆ ಉತ್ತರ.
ಬರೀ ಚರ್ಚೆ: ನಿರಂತರ ಬರದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಕೃಷ್ಣಬೈರೇಗೌಡ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ‘ಜಲಧಾರೆ’ ಯೋಜನೆ ರೂಪಿಸಿ ಸಮಗ್ರ ಯೋಜನೆ ಪ್ರಸ್ತಾಪಿಸಿದ್ದರು. ಸರ್ಕಾರ ಬದಲಾದಂತೆ ಯೋಜನೆ ಹಳ್ಳ ಹಿಡಿಯಿತು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅತಿವೃಷ್ಟಿ ಸಂದರ್ಭದಲ್ಲಿ ಹಾನಿಯಾಗಿದ್ದು ಅದರ ದುರಸ್ತಿಗೆ ಸರ್ಕಾರ ಒಂದಷ್ಟು ಸಮಯ ತೆಗೆದುಕೊಂಡಿತು. ಬಳಿಕ ನೆರೆ-ಅತಿವೃಷ್ಟಿ ಕಾರಣಕ್ಕೆ ಹಲವು ಕುಡಿಯುವ ನೀರಿನ ಯೋಜನೆಗಳು ನಿರೀಕ್ಷಿತ ವೇಗದಲ್ಲಿ ಆರಂಭವಾಗಲಿಲ್ಲ. ಒಟ್ಟಾರೆ ಶಾಶ್ವತ ವ್ಯವಸ್ಥೆಯಲ್ಲಿ ನೀರು ಕೊಡುವ ಪರಿಸ್ಥಿತಿ ಕಳೆದ ವರ್ಷಕ್ಕಿಂತ ಏನೂ ಭಿನ್ನವಾಗಿಲ್ಲ.
ಅಂತರ್ಜಲ ಕುಸಿತದ ಕಾರಣಕ್ಕೆ ಕೆಲ ಜಿಲ್ಲೆಗಳಲ್ಲಿ ಬೋರ್ವೆಲ್ ಕೊರೆಯುವುದನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದರು. ಇದೂ ಸರ್ಕಾರದ ಗಮನಕ್ಕೆ ಬಂದಿದ್ದು, ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಬೋರ್ವೆಲ್ ಕೊರೆಸಲು ಅವಕಾಶ ನೀಡಬೇಕೆಂದು ಸೂಚಿಸುವುದಾಗಿ ಕಂದಾಯ ಸಚಿವರೂ ಹೇಳಿದ್ದರು. ಇಷ್ಟರ ನಡುವೆ ಸಮಸ್ಯೆ ಮಾತ್ರ ದಿನೇದಿನೆ ಹೆಚ್ಚಾಗುತ್ತಿದೆ. 2018-19ನೇ ಸಾಲಿನ ಏಪ್ರಿಲ್ನಲ್ಲಿ 3,122 ಕಡೆ ಕುಡಿಯುವ ನೀರಿಗೆ ಸಮಸ್ಯೆಯಾಗಿ ಜನರು ಪರದಾಟ ಅನುಭವಿಸಿದ್ದರು.
ಕೈಗೊಂಡ ಕ್ರಮವೇನು?
ಮುಂಜಾಗ್ರತಾ ಕ್ರಮವಾಗಿ ಸರ್ಕಾರ 49 ಬರಪೀಡಿತ ತಾಲೂಕುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ತಲಾ 50 ಲಕ್ಷ ರೂ. ಬಿಡುಗಡೆ ಮಾಡಿದೆ. ಉಳಿದ ಸಮಸ್ಯಾತ್ಮಕ ತಾಲೂಕುಗಳಿಗೆ ತಲಾ 10 ಲಕ್ಷ ರೂ.ನಂತೆ ಹಂಚಿಕೆ ಮಾಡಿ, ಈ ಮೊತ್ತಕ್ಕೆ ಆಕಸ್ಮಿಕ ಸಂದರ್ಭದ ಆಕ್ಷನ್ ಪ್ಲಾ್ಯನ್ ತಯಾರಿಸಿ ಅನುಮೋದನೆ ಪಡೆದು, ಕುಡಿಯುವ ನೀರನ್ನು ಒದಗಿಸಲು ಅಗತ್ಯ ಕ್ರಮಕೈಗೊಳ್ಳು ವಂತೆ ಜಿಲ್ಲಾ ಪಂಚಾಯಿತಿಗಳಿಗೆ ಸೂಚನೆ ಕೊಡಲಾಗಿದೆ. ಅಂದಹಾಗೆ, ಈ ಎಲ್ಲ ಪ್ರಕ್ರಿಯೆ ಮುಗಿದಿರುವುದು ಫೆ.17ರಂದು, ಅಲ್ಲಿಂದೀಚೆಗೆ ಸಮಸ್ಯೆ ಹೆಚ್ಚಾಗಿದೆ.
ಶ್ರೀಕಾಂತ್ ಶೇಷಾದ್ರಿ