ಅಭಿವೃದ್ಧಿಗೆ ಸವಾಲಾದ ಚರಂಡಿ

Ull_Drainage
Published on

ಅನ್ಸರ್ ಇನೋಳಿ ಉಳ್ಳಾಲ ಮಳೆನೀರು ಹರಿಯಬೇಕಿದ್ದ ಚರಂಡಿಯಲ್ಲಿ ಖಾಸಗಿ ಕಟ್ಟಡಗಳ ತ್ಯಾಜ್ಯ ನೀರು ಹರಿದಾಡುತ್ತಿದೆ. ಒಂದೆಡೆ ಸಾರ್ವಜನಿಕರಿಗೆ ಅಸಹ್ಯ ದರ್ಶನ ನೀಡುತ್ತಿದ್ದರೆ ಮತ್ತೊಂದೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೂ ತಲೆನೋವು ತಂದಿಟ್ಟಿದೆ. ಇದು ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಕಾಣುವ ನರಕಸದೃಶ ದೃಶ್ಯದ ಕಥೆ. ತೊಕ್ಕೊಟ್ಟು ಜಂಕ್ಷನ್ ಉಳ್ಳಾಲದ ಹೃದಯ ಇದ್ದಂತೆ. ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ತೊಕ್ಕೊಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಮೇಲ್ಸೇತುವೆ ನಿರ್ಮಾಣಗೊಂಡ ಬಳಿಕ ಇಲ್ಲಿನ ಚಿತ್ರಣ ಬದಲಾಗಿದ್ದು ವೈಭವಕ್ಕೆ ಪೆಟ್ಟು ಬಿದ್ದಿದೆ. ಹಿಂದಿನ ವೈಭವ ಮತ್ತೆ ತರುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದ್ದು, ಅದರ ಭಾಗವಾಗಿ ತೊಕ್ಕೊಟ್ಟು ದೇರಳಕಟ್ಟೆ ಪ್ರಮುಖ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಸವಾಲಾದ ಚರಂಡಿ!: ಹೆದ್ದಾರಿ ಕಾಮಗಾರಿಗೆ ಇಲ್ಲಿನ ಚರಂಡಿಯೇ ಸವಾಲಾಗಿ ನಿಂತಿದೆ. ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಹೋಟೆಲ್ ಹಾಗೂ ಕೆಲವೊಂದು ಕಟ್ಟಡಗಳ ತ್ಯಾಜ್ಯ ನೀರು ಮಳೆನೀರು ಹರಿಯಬೇಕಾದ ಚರಂಡಿಯಲ್ಲಿ ವರ್ಷವಿಡೀ ಹರಿದಾಡುತ್ತಿದೆ. ಈ ಚರಂಡಿಯೂ ಅತ್ಯಂತ ಕಿರಿದಾಗಿದ್ದು, ಹೂಳು ತುಂಬಿ ನೀರು ಹರಿದಾಡುವುದೂ ಕ್ಲಿಷ್ಟಕರ ಎನಿಸಿದೆ. ಚರಂಡಿ ಭಾಗಶಃ ಮುಚ್ಚಲ್ಪಟ್ಟು ಅವ್ಯವಸ್ಥೆಯಲ್ಲಿ ಇರುವುದರಿಂದ ಮಳೆಗಾದಲ್ಲಿ ನೀರು ಹೆಚ್ಚಾಗಿ ರಸ್ತೆಯಲ್ಲೇ ಹರಿದಾಡುತ್ತದೆ. ಮಳೆಗಾಲ ಮುಗಿದ ಬಳಿಕವಾದರೂ ಕಿರಿಕ್ ತಪ್ಪುತ್ತದೆ ಎಂದರೆ ಅದಕ್ಕೂ ಅವಕಾಶವಿಲ್ಲ. ಯಾಕೆಂದರೆ ಇದೇ ಚರಂಡಿಗೆ ಹೋಟೆಲ್, ಇತರ ಕಟ್ಟಡಗಳ ತ್ಯಾಜ್ಯ ನೀರು ಬಿಡಲಾಗುತ್ತಿದೆ. ಆದರೆ ಯಾವ ಕಟ್ಟಡದಿಂದ ಬಿಡಲಾಗುತ್ತಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಇಲ್ಲೇ ತಲಪಾಡಿ, ಉಳ್ಳಾಲ, ಕಾಸರಗೋಡು ಭಾಗಕ್ಕೆ ಹೋಗುವವರು ಬಸ್ಸಿಗಾಗಿ ಕಾಯುತ್ತಾರೆ. ಸಾಕಷ್ಟು ವ್ಯಾಪಾರಿ ಮಳಿಗೆಗಳೂ ಇವೆ. ಇಲ್ಲಿ ಬರುವ ಎಲ್ಲರಿಗೂ ತ್ಯಾಜ್ಯ ನೀರಿನ ದರ್ಶನದ ಜತೆ ದುರ್ವಾಸನೆ ಭಾಗ್ಯವೂ ಸಿಗುತ್ತಿದೆ. ರಸ್ತೆ ಆದ ಬಳಿಕವೇನು?: ಪ್ರಸ್ತುತ ಷಟ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಉಳ್ಳಾಲ ಭಾಗದ ಪ್ರಮುಖ ಜಂಕ್ಷನ್ ಇದಾಗಿದ್ದು ಸ್ಪೀಕರ್ ಅವರ ಕ್ಷೇತ್ರವೂ ಆಗಿರುವುದರಿಂದ ವ್ಯವಸ್ಥಿತ ಹಾಗೂ ದೂರದೃಷ್ಟಿಯ ಯೋಜನೆ ಯು.ಟಿ.ಖಾದರ್ ರೂಪಿಸಿದ್ದಾರೆ. ಜಂಕ್ಷನ್‌ನಿಂದ ಬಸ್ ನಿಲ್ದಾಣದವರೆಗೆ ಷಟ್ಪಥ ಹಾಗೂ ಅಲ್ಲಿಂದ ಚೆಂಬುಗುಡ್ಡೆವರೆಗೆ ಚತುಷ್ಪಥ ಕಾಮಗಾರಿ ನಡೆಯಲಿದೆ. ಅಲ್ಲದೆ ಆಟೋ ಪಾರ್ಕ್ ಇರಲಿದೆ. ಚರಂಡಿಯೂ ವ್ಯವಸ್ಥಿತವಾಗಿ ನಿರ್ಮಾಣಗೊಳ್ಳಲಿದೆ. ಉಳ್ಳಾಲ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ಕೇಬಲ್ ಕಂಬಗಳ ನೆಲದಡಿ ಹಾಕುವ ಯೋಜನೆ ಇರುವುದರಿಂದ ನೂತನ ರಸ್ತೆಬದಿ ನೀರು ಹರಿಯುವ ಚರಂಡಿಗೆ ತಾಗಿಕೊಂಡು ಕೇಬಲ್ ಅಳವಡಿಕೆಗೂ ವ್ಯವಸ್ಥೆ ಮಾಡಲಾಗುತ್ತಿದೆ. ಇದರಲ್ಲೂ ಹೋಟೆಲ್, ಇತರ ಕಟ್ಟಡಗಳ ನೀರು ಹರಿದರೆ ಕೇಬಲ್ ಪರಿಸ್ಥಿತಿ ಏನು ಎನ್ನುವ ಪ್ರಶ್ನೆಯೂ ಎದ್ದಿದೆ. ಒಳಚರಂಡಿ ರಹಿತ ಉಳ್ಳಾಲ! ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಇಲ್ಲಿಗೆ ಸುಸಜ್ಜಿತ ಒಳಚರಂಡಿ ವ್ಯವಸ್ಥೆ ಕಾಮಗಾರಿ ಆರಂಭಗೊಂಡು ಹಲವು ವರ್ಷ ಕಳೆದಿವೆ. ಕಾಮಗಾರಿ ಪೂರ್ಣಗೊಳ್ಳುವ ಸನಿಹಕ್ಕೆ ಬಂದಾಗ ತಡೆ ಬಂದ ಕಾರಣ ಕಾಮಗಾರಿ ಪೂರ್ಣಗೊಂಡಿಲ್ಲ. ಇದರ ಪರಿಣಾಮ ತೊಕ್ಕೊಟ್ಟು ಸಹಿತ ಕೆಲವೆಡೆ ನೀರು ಹರಿಯುವ ಚರಂಡಿಯಲ್ಲೇ ಮನೆ, ಹೋಟೆಲ್, ಇತರ ಕಟ್ಟಡಗಳ ತ್ಯಾಜ್ಯ ನೀರು ಹರಿದಾಡುವುದು ಸಾಮಾನ್ಯ ಎನಿಸಿದೆ. ಆದರೂ ನೀರು ಹರಿವು ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಲ್ಲಿ ನಗರಸಭೆ ವಿಫಲವಾಗಿದೆ.

ರಾಜ್ಯ ಹೆದ್ದಾರಿ ಪಕ್ಕ ಹರಿದಾಡುತ್ತಿದ್ದ ನೀರು ಪಡೆಯಲಾಗಿದೆ, ರಾಷ್ಟ್ರೀಯ ಹೆದ್ದಾರಿ ಪಕ್ಕ ಚರಂಡಿ ಇರುವುದರಿಂದ ಸಂಬಂಧಪಟ್ಟ ಇಲಾಖೆ ಸರಿಪಡಿಸಬೇಕು. ನಗರಸಭೆ ವ್ಯಾಪ್ತಿಯಲ್ಲಿರುವ ಕಟ್ಟಡಗಳಿಂದ ನೀರು ಹರಿಯುತ್ತಿರುವ ಬಗ್ಗೆ ಮಾಹಿತಿ ಇಲ್ಲ, ಈ ಬಗ್ಗೆ ಪರಿಶೀಲಿಸಲಾಗುವುದು. ಮತ್ತಡಿ, ಉಳ್ಳಾಲ ನಗರಸಭೆ ಪೌರಾಯುಕ್ತ. ಚರಂಡಿ ಇರುವುದು ಮಳೆನೀರು ಹರಿಯಲು. ಹೋಟೆಲ್ ಇತರ ಕಟ್ಟಡಗಳು, ಮನೆಗಳ ತ್ಯಾಜ್ಯ ನೀರಿಗೆ ಅವರೇ ವ್ಯವಸ್ಥೆ ಮಾಡಬೇಕು. ತೊಕ್ಕೊಟ್ಟು ಬಸ್ ತಂಗುದಾಣದ ಬಳಿ ಹರಿಯುತ್ತಿದ್ದ ನೀರನ್ನು ಬಂದ್ ಮಾಡಿ ನಗರಸಭೆ ಕ್ರಮ ಕೈಗೊಂಡಿದೆ. ಅದೇ ರೀತಿ ರಾ.ಹೆ. ಸರ್ವೀಸ್ ರಸ್ತೆ ಪಕ್ಕ ನೀರು ಹರಿಯದಂತೆ ನಡೆಯಬೇಕು. ಮನ್ಸೂರ್ ಮಂಚಿಲ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net