

ಹೇಮನಾಥ್ ಪಡುಬಿದ್ರಿ
ಎಲ್ಲೆಂದರಲ್ಲಿ ಸುರಿದ ಘನತ್ಯಾಜ್ಯದಿಂದ ಪಡುಬಿದ್ರಿ ಗ್ರಾಪಂ ವ್ಯಾಪ್ತಿ ರಸ್ತೆ ಚರಂಡಿಗಳು ತುಂಬಿ ಮಳೆ ನೀರು ಸರಾಗ ಹರಿಯದೆ ಕೃತಕ ನೆರೆಗೆ ಕಾರಣವಾಗುತ್ತಿದೆ. ಮಳೆಗಾಲ ಆರಂಭದಲ್ಲಿ ಚರಂಡಿ ಹೂಳೆತ್ತುವ ಕಾರ್ಯವೂ ಇಲ್ಲಿ ಪರಿಣಾಮಕಾರಿಯಾಗಿ ನಡೆದಂತಿಲ್ಲ.
ಪ್ರಸ್ತುತ 20,000 ಜನಸಂಖ್ಯೆ ಹೊಂದಿರುವ ಉಡುಪಿ ಜಿಲ್ಲೆಯ ಅತಿ ದೊಡ್ಡ ಗ್ರಾಪಂಗಳಲ್ಲೊಂದಾದ ಪಡುಬಿದ್ರಿ ಗ್ರಾಪಂ ಘನತ್ಯಾಜ್ಯ ವಿಲೇ ಘಟಕ ಆರಂಭಿಸಿದರೂ ರಸ್ತೆಗೆ ಸುರಿಯುವ ತ್ಯಾಜ್ಯಕ್ಕೆ ಇನ್ನೂ ಬಿದ್ದಿಲ್ಲ ಕಡಿವಾಣ. ಮನೆಗಳಿಂದ ಕಸ ಸಂಗ್ರಹ ಆರಂಭಿಸಿದರೂ ಕೆಲವೆಡೆ ಜನರು ಕಸ ಸಂಗ್ರಹಣೆಗೆ ಮಾಸಿಕ ನಿಗದಿತ ಮೊತ್ತ ನೀಡಲು ಹಿಂದೇಟು ಹಾಕುತ್ತಿರುವ ಪರಿಣಾಮ ಕಸ ಎಲ್ಲೆಂದರಲ್ಲಿ ಸುರಿಯುವ ಜಾಯಮಾನ ಮುಂದುವರಿಯುತ್ತಿದೆ. ಪರಿಣಾಮ ಗ್ರಾಮದಲ್ಲಿ ಹಾದುಹೋಗುವ ಹೆದ್ದಾರಿ, ಗ್ರಾಮೀಣ ರಸ್ತೆಗಳ ಇಕ್ಕೆಲ ತ್ಯಾಜ್ಯ ಕೊಂಪೆಗಳಾಗಿ ಬೇಸಿಗೆ ಕಾಲದಲ್ಲಿ ದುರ್ವಾಸನೆಗೆ ಕಾರಣವಾದರೆ, ಮಳೆಗಾಲದಲ್ಲಿ ರಸ್ತೆಯಲ್ಲಿಯೇ ಹರಿಯುವ ಮಲಿನ ನೀರಿನಲ್ಲಿಯೇ ಓಡಾಡಿ ಅನಾರೋಗ್ಯಕ್ಕೆ ತುತ್ತಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ದಿನನಿತ್ಯ ಪೊಲೀಸರು ಹಾಗೂ ನೂರಾರು ಜನಸಂಚರಿಸುವ ಪೊಲೀಸ್ ವಸತಿಗೃಹ ಸಂಪರ್ಕ ರಸ್ತೆ ಇಕ್ಕೆಲಗಳಲ್ಲಿ ತ್ಯಾಜ್ಯ ತುಂಬಿದ್ದು, ಚರಂಡಿಯೇ ಮಾಯವಾಗಿದೆ. ಬೇಸಿಗೆಯಲ್ಲಿ ಇಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಹತೋಟಿಗೆ ತರುವ ಪ್ರಯತ್ನ ನಡೆಸಲಾಗಿತ್ತಾದರೂ, ಇದೀಗ ಮತ್ತೆ ತ್ಯಾಜ್ಯ ತುಂಬಿ ಮಳೆಗಾಲದಲ್ಲಿ ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಾಡಾಗಿದೆ. ಇದೇ ರೀತಿ ಪಡುಬಿದ್ರಿ ಅಬ್ಬೇಡಿ ರಸ್ತೆ, ಅಲಂಗಾರು ರಸ್ತೆ, ಪಡುಬಿದ್ರಿ ಕೆಳಗಿನ ಪೇಟೆ ಹಳೇ ಎಂಬಿಸಿ ರಸ್ತೆ, ಬೀಡು ಮಂಜೊಟ್ಟಿ ರಸ್ತೆ ಚರಂಡಿಗಳಲ್ಲಿ ಮೂಟೆಗಟ್ಟಲೇ ತ್ಯಾಜ್ಯ ತುಂಬಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಪಡುಬಿದ್ರಿ ಕೆಳಗಿನ ಪೇಟೆ ಹಳೇ ಎಂಬಿಸಿ ರಸ್ತೆಯಲ್ಲಿ ಕಾಂಕ್ರೀಟ್ ಚರಂಡಿಯಿದ್ದರೂ ತ್ಯಾಜ್ಯ ಹಾಗೂ ಗಿಡಗಂಟಿಗಳಿಂದ ಆವರಿಸಿದ್ದು, ಗ್ರಾಪಂ ಅದರ ತೆರವಿಗೆ ಗಮನಹರಿಸಿದಂತಿಲ್ಲ. ವಿಪರೀತ ಮಳೆ ಬಂದಾಗ ದೇವಸ್ಥಾನ, ಶಾಲೆಗೆ ಸಂಚರಿಸುವ ಜನ ಹಾಗೂ ವಾಹನ ಸವಾರರು ಸಂಕಷ್ಟಪಡುವ ಸ್ಥಿತಿಯಿದೆ.
ಬೆಳೆಯುತ್ತಿರುವ ಪಟ್ಟಣವಾಗಿರುವ ಪಡುಬಿದ್ರಿಯಲ್ಲಿ ಕೈಗಾರಿಕಾ ಘಟಕ, ವಸತಿ ಸಂಕೀರ್ಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದಕ್ಕೆ ಹೊಂದಿಕೊಂಡಂತೆ ವಲಸೆ ಕಾರ್ಮಿಕರ ಸಂಖ್ಯೆಯೂ ಅಧಿಕವಾಗುತ್ತಿದ್ದು, ಸೂಕ್ತ ಮೂಲಸೌಕರ್ಯವಿಲ್ಲದ ಕಡೆ ಬಾಡಿಗೆಕೋಣೆ ಪಡೆದು ವಾಸಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಲ್ಲಿ ವಾಸವಾಗಿರುವ ಜನರಿಗೆ ಸ್ವಚ್ಛತೆ ಅರಿವು ಮೂಡಿಸುವಲ್ಲಿ ಕಟ್ಟಡ ಮಾಲೀಕರು ಪ್ರಯತ್ನಿಸಿದಂತಿಲ್ಲ. ಕಸ ಸಂಗ್ರಹಣೆಗೆ ವಾಹನ ಬಂದರೂ ಕಸ ನೀಡಲು ಹಿಂದೇಟು ಹಾಕುವ ಮಂದಿಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವ ಪ್ರವೃತ್ತಿ ಬೆಳೆಯುತ್ತಿದೆ. ಬಾಡಿಗೆದಾರರು ಸಹಿತ ಕಟ್ಟಡ ಮಾಲೀಕರಿಗೆ ಸ್ವಚ್ಛತಾ ಜಾಗೃತಿ ಮೂಡಿಸುವ ಕಾರ್ಯವನ್ನು ಸ್ಥಳೀಯಾಡಳಿತವೂ ಮಾಡಬೇಕಾದ ಅನಿವಾರ್ಯತೆಯಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ಮಳೆಗಾಲ ಮುಂಜಾಗ್ರತವಾಗಿ ಚರಂಡಿ ಹೂಳೆತ್ತುವ ಕಾರ್ಯ ಶೇ.100 ಆಗಿಲ್ಲ. ಪ್ರತಿ ವರ್ಷ ನೆರೆ ಉಂಟಾಗುವ ಪ್ರದೇಶಗಳಲ್ಲಿನ ರಸ್ತೆ ಚರಂಡಿ ಆದ್ಯತೆಯಲ್ಲಿ ಹೂಳೆತ್ತಲು ಗ್ರಾಪಂ ಕ್ರಮವಹಿಸುತ್ತಿದ್ದು, ಅನುದಾನ ಕೊರತೆಯಿಂದ ಎಲ್ಲ ರಸ್ತೆಗಳ ಚರಂಡಿ ಹೂಳೆತ್ತಲು ಮುಂದಾಗುತ್ತಿಲ್ಲ. ಗ್ರಾಪಂ ಗಮನಕ್ಕೆ ಬಂದ ಪ್ರದೇಶಗಳಲ್ಲಿ ಹೂಳೆತ್ತಲು ಕ್ರಮವಹಿಸಲಾಗುವುದು.-ಮಂಜುನಾಥ ಶೆಟ್ಟಿ, ಪಿಡಿಒ ಪಡುಬಿದ್ರಿ