ದೊಡ್ಡಣ್ಣನಿಗೆ ಡ್ರ್ಯಾಗನ್​ ಪಂಚ್​: ಅಮೆರಿಕ ನಮ್ಮ ಮೇಲೆ ನಿರ್ಬಂಧಗಳನ್ನು ಹೇರಿದರೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದ China

China
Published on

ಬೀಜಿಂಗ್​: ಚೀನಾ(China) ರಷ್ಯಾದಿಂದ ತೈಲ ಆಮದು ಕಾನೂನುಬದ್ಧ ಎಂದು ಸಮರ್ಥಿಸಿಕೊಂಡಿದ್ದು, ನಮ್ಮ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಏಕಪಕ್ಷೀಯ ನಿರ್ಬಂಧಗಳನ್ನು ವಿಧಿಸಿದರೆ ತಕ್ಕ ಪ್ರತಿಕಾರ ತಿರಿಸಿಕೊಳ್ಳುತ್ತೇವೆ ಎಂದು ಅಮೆರಿಕಕ್ಕೆ ಡ್ರ್ಯಾಗನ್​ ರಾಷ್ಟ್ರ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್, ಅಮೆರಿಕದ ಏಕಪಕ್ಷೀಯ ಬೆದರಿಸುವಿಕೆ ಮತ್ತು ಆರ್ಥಿಕವಾಗಿ ಬಲವಂತ ಮಾಡುತ್ತಿದೆ. ಅಲ್ಲದೆ, ಇದು ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ ಮತ್ತು ಜಾಗತಿಕ ಕೈಗಾರಿಕಾ ಮತ್ತು ಪೂರೈಕೆ ಸರಪಳಿಗಳ ಸುರಕ್ಷತೆ ಮತ್ತು ಸ್ಥಿರತೆಗೆ ಬೆದರಿಕೆ ಹಾಕುತ್ತದೆ ಎಂದು ಕಿಡಿಕಾರಿದ್ದಾರೆ.

ಮುಂದುವರೆದು ಮಾತನಾಡಿದ ಲಿನ್ ಜಿಯಾನ್, ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಚೀನಾ ಯಾವಾಗಲೂ ನ್ಯಾಯಯುತ ನಿಲುವನ್ನು ಕಾಯ್ದುಕೊಂಡಿದೆ. ಈ ವಿಷಯವನ್ನು ಚೀನಾದ ಕಡೆಗೆ ನಿರ್ದೇಶಿಸುವ ಅಮೆರಿಕದ ಕ್ರಮವನ್ನು ನಾವು ವಿರೋಧಿಸುತ್ತೇವೆ ಮತ್ತು ಚೀನಾದ ಮೇಲೆ ಕಾನೂನುಬಾಹಿರ ಏಕಪಕ್ಷೀಯ ನಿರ್ಬಂಧಗಳು ಹೇರುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

ಚೀನಾದ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗೆ ಹಾನಿಯಾದರೆ, ನಮ್ಮ ಸಾರ್ವಭೌಮತ್ವ, ಅಭಿವೃದ್ಧಿ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಕಾಪಾಡಲು ನಾವು ದೃಢವಾದ ಪ್ರತಿಕ್ರಿಯೆಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಟ್ರಂಪ್​ ನೀತಿಗಳನ್ನು ಟೀಕಿಸಿದ್ದಾರೆ.

ಚೀನಾ ವಿರುದ್ಧ ಅಮೆರಿಕ ಕಠಿಣ ನಿಲುವು ತಳೆಯುತ್ತದೆ

ಚೀನಾಗೆ ಅಮೆರಿಕ ಕಠಿಣ ಎಚ್ಚರಿಕೆ ನೀಡಿತು. ಚೀನಾದಿಂದ ಆಮದು ಮಾಡಿಕೊಳ್ಳುವ ಮೇಲೆ, ವಿಶೇಷವಾಗಿ ರಷ್ಯಾದೊಂದಿಗಿನ ವ್ಯಾಪಾರಕ್ಕೆ ಸಂಬಂಧಿಸಿದವುಗಳ ಮೇಲೆ ಶೇ, 500 ರಷ್ಟು ಸುಂಕ ವಿಧಿಸುವುದನ್ನು ಯುಎಸ್ ಸೆನೆಟರ್‌ಗಳು ಬೆಂಬಲಿಸಬಹುದು ಎಂದು ಯುಎಸ್ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದರು. ಅಲ್ಲದೆ, 85 ಯುಎಸ್ ಸೆನೆಟರ್‌ಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸುಂಕಗಳನ್ನು ವಿಧಿಸಲು ಅಧಿಕಾರವನ್ನು ನೀಡಲು ಸಿದ್ಧರಿದ್ದಾರೆ ಎಂದು ಬೆಸೆಂಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ರಷ್ಯಾದ ಇಂಧನವನ್ನು ಖರೀದಿಸಿದ್ದಕ್ಕಾಗಿ ಬೀಜಿಂಗ್ ಅನ್ನು ಬೆಸೆಂಟ್ ಟೀಕಿಸಿದರು ಮತ್ತು ಇಂತಹ ಆಮದುಗಳು ರಷ್ಯಾದ ಯುದ್ಧ ಯಂತ್ರಕ್ಕೆ ಪ್ರಯೋಜನವನ್ನು ನೀಡುತ್ತಿವೆ ಎಂದು ಹೇಳಿಕೊಂಡರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net