

ಡಾ. ರಾಜಕುಮಾರ್ ಅಭಿನಯದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು ಗೊತ್ತೇ ಇದೆ. ಆ ನಂತರ ಅವರ 13 ಚಿತ್ರಗಳಿಗೆ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗಳು ಸಿಕ್ಕಿವೆ. ಅವರ ಚಿತ್ರಗಳಿಗೆ ಪ್ರಶಸ್ತಿ ಸಿಕ್ಕರೂ, ವೈಯಕ್ತಿಕವಾಗಿ ಅವರಿಗೆ ಮೊದಲಿಗೆ ದೊಡ್ಡ ಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿದ್ದು ಎಂದರೆ ಅದು 1968ರಲ್ಲಿ.
‘ಬಂಗಾರದ ಹೂವು’ ಚಿತ್ರದಲ್ಲಿ ನಟನೆಗಾಗಿ ರಾಜಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ವಿಶೇಷವೆಂದರೆ, ರಾಜ್ಯ ಸರ್ಕಾರವು ರಾಜ್ಯ ಪ್ರಶಸ್ತಿಗಳನ್ನು ಸ್ಥಾಪಿಸಿದ್ದು 1967-68ರಲ್ಲಿ. ಹೀಗೆ ಪ್ರಶಸ್ತಿ ಸ್ಥಾಪನೆಯಾದ ವರ್ಷವೇ ಮೊದಲ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ರಾಜಕುಮಾರ್, ತಮ್ಮ ಚಿತ್ರಜೀವನದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ರಾಜ್ಯ ಸರ್ಕಾರದಿಂದ ಒಟ್ಟು ಒಂಬತ್ತು ಬಾರಿ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಾರೂ ಮುರಿಯದ ದಾಖಲೆಯೊಂದನ್ನು ಸ್ಥಾಪಿಸಿದ್ದಾರೆ.
‘ಬಂಗಾರದ ಹೂವು’ ನಂತರ ‘ಕುಲ ಗೌರವ’, ‘ಭಕ್ತ ಕುಂಬಾರ’, ‘ಬಬ್ರುವಾಹನ’, ‘ಹೊಸ ಬೆಳಕು’, ‘ಹಾಲು ಜೇನು’, ‘ದೇವತಾ ಮನುಷ್ಯ’, ‘ಜೀವನ ಚೈತ್ರ’ ಮತ್ತು ‘ಒಡಹುಟ್ಟಿದವರು’ ಚಿತ್ರಗಳ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಏಳು ಪ್ರಶಸ್ತಿಗಳನ್ನು ಪಡೆಯುವ ಮೂಲಕ ವಿಷ್ಣುವರ್ಧನ್ ಎರಡನೆಯ ಸ್ಥಾನದಲ್ಲಿದ್ದರೆ, ನಾಲ್ಕು ಬಾರಿ ಅತ್ಯುತ್ತಮ ನಟರಾಗುವ ಮೂಲಕ ಅನಂತ್ ನಾಗ್ ಮತ್ತು ಶಿವರಾಜಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ.