

ಬೆಂಗಳೂರು: 1945ರಲ್ಲಿ ಜರ್ಮನಿ, ಇಂಗ್ಲೆಂಡ್, ಜಪಾನ್ 2ನೇ ವಿಶ್ವಯುದ್ಧದ ಕಾರಣಕ್ಕಾಗಿ ಮತ್ತೊಮ್ಮೆ ತಮ್ಮ ರಾಷ್ಟ್ರದ ಪುನರ್ ನಿರ್ಮಾಣಕ್ಕೆ ಮುಂದಾದರು. 1948ರಲ್ಲಿ ಶತಮಾನಗಳ ಕಾಲ ಕಂಡ ಕನಸ್ಸಿನ ಪ್ರತಿಫಲವಾಗಿ ಇಸ್ರೇಲ್ ತನ್ನ ಸ್ವಂತ ರಾಷ್ಟ್ರದ ಹುಟ್ಟಿನೊಂದಿಗೆ ಪುನರ್ ಉಗಮ ಕಂಡಿತು. ಆದರೆ 1947ರಲ್ಲಿ ಅಂದರೆ ಅವುಗಳಿಗೆ ಸಮಕಾಲೀನವಾಗಿ ಸ್ವಾಧೀನತೆಯನ್ನು ಪಡೆದುಕೊಂಡ ಭಾರತ ನಮ್ಮ ಅಸ್ತಿತ್ವದ ಆತ್ಮ ಯಾವುದು ಎನ್ನುವುದನ್ನು ನಾವು ಮರೆತಿರುವ ಕಾರಣ ಅವರಷ್ಟು ಬೆಳವಣಿಗೆ ಸಾಧಿಸಲು ಆಗಲಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಡಾ.ಮನಮೋಹನ್ ವೈದ್ಯ ಮಾತನಾಡಿದರು.
ದಿಶಾ ಭಾರತ ಸಂಸ್ಥೆಯ ‘ನನ್ನ ಭಾರತ’ ಅಭಿಯಾನದ ಸಮಾರೋಪ ಸಮಾರಂಭದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಭಾರತ ಜೀವನ ಧರ್ಮ ಅಧ್ಯಾತ್ಮಾಧಾರಿತವಾಗಿತ್ತು. ಅದು ಪ್ರತಿ ಭಾರತೀಯನಿಗೂ ಒಂದು ಆಕಾರವನ್ನು ನೀಡಿದೆ. ಸತ್ಯ ಒಂದೇ, ಅದನ್ನು ಅರಿಯುವ ಮಾರ್ಗ ಹಲವು ಎನ್ನುವುದನ್ನು ನಂಬಿದ್ದೇವೆ. ಜಗತ್ತಿನ ಎಲ್ಲರನ್ನು ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ. ಆದರೂ ಭಾರತದಲ್ಲಿ ಅಸಹಿಷ್ಣುತೆ ಇದೆ ಎನ್ನಲಾಗುತ್ತದೆ. ಸಹಿಷ್ಣುತೆಯೆನ್ನುವುದು ಬಂದಾಗಲೇ ಅಸಹಿಷ್ಣುತೆಯ ಬೀಜ ಭಿತ್ತಲಾಗುತ್ತದೆ ಎನ್ನುವುದ ವಾಸ್ತವ. ಹಾಗಾಗಿ ಸ್ವಾಮಿ ವಿವೇಕಾನಂದರು 1893ರ ಚಿಕಾಗೋ ಉಪನ್ಯಾಸದಲ್ಲಿ ಹೇಳಿದಂತೆ ನಾವು ಸಹಿಸುಕೊಳ್ಳುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲಾ ಮಾರ್ಗಗಳನ್ನು ಒಪ್ಪಿಕೊಳ್ಳುತ್ತೇವೆ. ಜಗತ್ತಿನ ಪ್ರತಿ ಅಂಶವೂ ದೈವಾಂಶ ಸಂಭೂತ ಎಂದು ಭಾವಿಸುತ್ತೇವೆ. ಈ ನಿಲುವುಗಳ ಅರ್ಥ ಏಕತೆಯನ್ನು ನೋಡುವ ಭಾರತದ ದೃಷ್ಟಿಯನ್ನು ತಿಳಸುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಪರಂಪರೆಯೇ ಆಗಿದೆ. ಆದರೆ ಭಾರತ ವಿವಿಧ ಸಂಸ್ಕೃತಿಯ ರಾಷ್ಟ್ರ ಎನ್ನಲಾಗುತ್ತದೆ. ಆದರೆ ವಾಸ್ತವದಲ್ಲಿ ಇದು ಸರಿಯಾದ ವಿಶ್ಲೇಷಣೆಯಲ್ಲ. ಭಾರತದ ಸಂಸ್ಕೃತಿ ವಿವಿಧತೆಯನ್ನು ಆಚರಿಸುವುದಾಗಿದೆ ಎನ್ನುವುದು ಸರಿಯಾದ ವಿಶ್ಲೇಷಣೆ. ನಮ್ಮ ಸಂಸ್ಕೃತಿ ಒಂದೇ. ಅದರ ಆಧಾರ ಆಧ್ಯಾತ್ಮಿಕತೆ.
ಭಾರತದ ಜೀವನಧರ್ಮ ಪ್ರತಿ ಆತ್ಮವೂ ಸಮಾನವಾಗಿ ಶಕ್ತವಾಗಿರುತ್ತದೆ ಎನ್ನುವುದನ್ನು ತಿಳಿಸುತ್ತದೆ. ಸ್ತ್ರೀ ಮತ್ತು ಪುರುಷ ಇಬ್ಬರೂ ಸಮಾನವಾಗಿ ಶಕ್ತರು ಎನ್ನುವುದನ್ನು ಭಾರತ ಮಾತ್ರ ಒಪ್ಪುತ್ತದೆ. ಪ್ರಕೃತಿಯನ್ನು ಆಂತರಿಕವಾಗಿ ಮತ್ತು ಬಾಹ್ಯವನ್ನು ಕಂಡುಕೊಳ್ಳುವ ಮೂಲಕ ಪ್ರತಿ ಭಾರತೀಯ ತನ್ನೊಳಗೆ ದೈವತ್ವವನ್ನು ಪ್ರಕಟೀಕರಿಸಬೇಕು ಎನ್ನುವುದೇ ನಮ್ಮ ಧರ್ಮದ ಧ್ಯೇಯವಾಗಿದೆ. ಅದಕ್ಕಾಗಿ ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ ಮತ್ತು ರಾಜಯೋಗ ಎಂಬ ನಾಲ್ಕು ಮಾರ್ಗಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಧರ್ಮ ಮತ್ತು ರಿಲಿಜನ್ ಬೇರೆ ಬೇರೆಯದ್ದೇ ಆಗಿವೆ. ಭಾರತ ಜನಾಧಾರಿತ ರಾಷ್ಟ್ರ, ಇಲ್ಲಿನ ಜನರನ್ನು ಅವರ ಜೀವನ ಧರ್ಮಾಧಾರಿತವಾಗಿ ಹಿಂದೂ ಎಂದು ಕರೆಯಲಾಯಿತು. ಹಾಗಾಗಿ ಇದು ಹಿಂದೂರಾಷ್ಟ್ರ. ಆಂಗ್ಲ ಭಾಷೆಯಲ್ಲಿ ಈ ಕಲ್ಪನೆ ಇಲ್ಲದಿರುವುದರಿಂದ ಅದಕ್ಕೆ ಪರ್ಯಾಯ ಶಬ್ದವಿಲ್ಲ. ಧರ್ಮವೆನ್ನುವುದು ಜಗತ್ತಿನ ಬೃಹತ್ ಶಕ್ತಿಯೊಂದಿಗಿನ ಸಂಪರ್ಕಕ್ಕಿರುವ ಮಾರ್ಗ ಎನ್ನಲಾಗುತ್ತದೆ. ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ. ಸಮಾಜದ ಎಲ್ಲಾ ಕೆಲಸಗಳನ್ನು ಧರ್ಮದ ಆಧಾರದ ಮೇಲೆ ಕೈಗೊಳ್ಳಬೇಕು, ಬೆಂಬಲಿಸಬೇಕು. ಈ ಭಾವ ಜಾಗೃತಿಯಾಗಬೇಕು. ಭಾರತದ ‘ಸ್ವ’ ಕುರಿತು ಅರಿತುಕೊಳ್ಳಬೇಕು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಭಾರತ ವೆಲ್ಫೇರ್ ಸ್ಟೇಟ್ ಅಲ್ಲ. ವೆಲ್ಫೇರ್ ಸ್ಟೇಟ್ ಕಲ್ಪನೆ ಪಾಶ್ಚಾತ್ಯರದ್ದು. ನಮ್ಮ ಸಮಾಜ ರಾಜರ ಆಧಾರಿತವಾಗಿರಲಿಲ್ಲ. ಯುದ್ಧವಾದರೆ ರಾಜರುಗಳು ಸೋಲುತ್ತಿದ್ದರು, ಸಮಾಜವಲ್ಲ. ವಿದೇಶಾಂಗ ನೀತಿ, ನ್ಯಾಯಾಂಗ, ಸೇನೆ ಮತ್ತು ರಕ್ಷಣೆ ಎಂಬ ನಾಲ್ಕು ವಿಷಯಗಳು ಮಾತ್ರ ರಾಜರುಗಳ ನಿಯಂತ್ರಣದಲ್ಲಿದ್ದವು. ಉಳದಂತೆ ಶಿಕ್ಷಣ, ಆರೋಗ್ಯ, ಕೈಗಾರಿಕೆಗಳು, ದೇವಾಲಯಗಳು, ವ್ಯಾಪಾರ, ಕಲೆ ಎಲ್ಲವೂ ಸಮಾಜದ ಮೂಲಕ ನಡೆಯುತ್ತಿತ್ತು. ಇದರ ಜೊತೆಗೆ ಭಾರತ ಕೃಷಿ ಪ್ರಧಾನ ರಾಷ್ಟ್ರವೆಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ಭಾರತ ಉದ್ಯೋಗ ಪ್ರಧಾನ ರಾಷ್ಟ್ರ. ಹಾಗಾಗಿ 18ನೇ ಶತಮಾನದ ಆರಂಭದ ವರೆಗೂ ನಾವು ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದ್ದೆವು.
ಅಭ್ಯುದಯ ಮತ್ತು ನಿಶ್ರೇಯಸ್ಸಿನ ಸಾಧನೆ ಧರ್ಮವೆನ್ನುತ್ತೇವೆ. ಭಾರತ ಬೌದ್ಧಿಕ ಸಮೃದ್ಧಿಗೂ ಮಹತ್ವವನ್ನು ನೀಡಿದೆ. ಅವಿದ್ಯಾ ಬೌದ್ಧಿಕ ಉನ್ನತಿಯನ್ನು ಪಡೆಯುವುದಾಗಿದ್ದರೆ, ವಿದ್ಯೆ ಆಧ್ಯಾತ್ಮಿಕ ಅಮರತ್ವವನ್ನು ಸಾಧಿಸುವುದಾಗಿದೆ. ಎರಡೂ ಬಹಳ ಮಹತ್ವವನ್ನು ಹೊಂದಿದೆ. ಭಾರತದಲ್ಲಿ ಶಾಸ್ತ್ರ ಮತ್ತು ಧ್ಯಾನಕ್ಕೆ ಮಹತ್ವವನ್ನು ನೀಡಿದಂತೆ ಶಕ್ತಿಯ ಸಾಧನೆಗೂ ಮಹತ್ವ ನೀಡಲಾಗಿದೆ. ಪ್ರಥಮವಾಗಿ ಶಾಸ್ತ್ರ ಮತ್ತು ನಂತರ ಶಕ್ತಿ ಇವೆರಡೂ ಒಂದಂಕ್ಕೊಂದು ಹೊಂದುಕೊಂಡು ಜತೆಗೆ ಹೋಗುತ್ತದೆ ಎಂದರು.
ಹೀಗೆ ಭಾರತಕ್ಕೆ ಹಲವು ವಿಶೇಷತೆಗಳಿವೆ. ಇವೆಲ್ಲದಕ್ಕೂ ಮೂಲ ಹಿಂದುತ್ವವೇ ಆಗಿದೆ. ಮೊದಲು ಭಾರತ ಮತ್ತು ಪಾಕಿಸ್ತಾನ ಒಂದೇ ದೇಶವಾಗಿತ್ತು. ವಿಭಜನೆಯ ನಂತರ ಪ್ರತ್ಯೇಕ ಸಂವಿಧಾನ ರಚನೆಯಾದಾಗ ಪಾಕಿಸ್ತಾನ ಸಮಾನತೆಯನ್ನು ನಿರ್ಲಕ್ಷಿಸಿತು. ನಮ್ಮಲ್ಲಿ ಸಮಾನತೆ ಪ್ರಧಾನವಾಯಿತು. ಇದು ಸಂವಿಧಾನ ರಚನೆಯಲ್ಲಿ ಹಿಂದೂ ಬಾಹುಳ್ಯ ಹೆಚ್ಚಿದ್ದರಿಂದ ಸಾಧ್ಯವಾಯಿತು.
ಸೆಕ್ಯುಲರಿಸಮ್ ಯೂರೋಪಿನಲ್ಲಿ 16ನೇ ಶತಮಾನದ ಕಲ್ಪನೆ. ಎಲ್ಲಾ ಮತಗಳನ್ನು ಸಮಾನವಾಗಿ ಕಾಣೂವುದು ಇದರ ಅರ್ಥ. ಹಿಂದುತ್ವದ ಕಾರಣಕ್ಕಾಗಿ ಭಾರತ ಸಹಸ್ರಾರು ವರ್ಷಗಳಿಂದ ಸರ್ವರನ್ನೂ ಸಮಾನವಾಗಿ ಕಾಣುತ್ತಲೇ ಬಂದಿದ್ದರಿಂದ ಮೂಲ ಸಂವಿಧಾನದಲ್ಲಿ ಸೆಕ್ಯುಲರಿಸಂ ಪದದ ಬಳಕೆಯ ಅವಶ್ಯಕತೆ ಇಲ್ಲ ಎಂದು ಸಂವಿಧಾನ ರಚನಾ ಸಂದರ್ಭದ ಚರ್ಚೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಯಾವುದೇ ಚರ್ಚೆ ನಡೆಸದೆ ಮುಂದೆ ಸಂವಿಧಾನದ ಪೀಠಿಕೆಗೆ ಸೋಶಿಯಲಿಸ್ಟ್, ಸೆಕ್ಯುಲರ್ ಸೇರಿಸಿರುವುದು ಸಂವಿಧಾನಕ್ಕೆ ಮಾಡಿದ ಅತ್ಯಂತ ದೊಡ್ಡ ಮೋಸ ಎಂದು ಹೇಳಿದರು.