ಸಮೃದ್ಧ ಭಾರತ ನಿರ್ಮಾಣಕ್ಕೆ ಒಂದಾಗಿ ಕೆಲಸ ಮಾಡೋಣ: ಡಾ.ಮನಮೋಹನ್ ವೈದ್ಯ

Dr. Manmohan Vaidya
Published on

ಮಹಾರಾಷ್ಟ್ರ: ಸಂಘ ಕಾರ್ಯ ವಿಸ್ತಾರದ ದೃಷ್ಟಿಯಿಂದ ಪ್ರಾರಂಭವಾದ 35-36 ಸಂಘಟನೆಗಳು ಸ್ವಾಯತ್ತ ಸಂಘಟನೆಗಳು. ಅವುಗಳ ನಿರ್ಣಯ ಪ್ರಕ್ರಿಯೆ ಸ್ವತಂತ್ರವಾಗಿರುತ್ತದೆ. ಸಮಾಜ ಜೀವನದಲ್ಲಿ ಕೆಲಸ ಮಾಡುವ ಈ ಸಂಘಟನೆಗಳ ಕಾರ್ಯಕರ್ತರಿಗೆ ಅನೇಕ ಅನುಭವಗಳು, ತಮ್ಮ ಕ್ಷೇತ್ರದಲ್ಲಿ ಗುರುತಿಸಿದ ಅಂಶಗಳು ಲಭ್ಯವಾಗುತ್ತವೆ. ಅವುಗಳ ಕುರಿತು ಪರಸ್ಪರ ಹಂಚಿಕೊಂಡು ಚರ್ಚಿಸುವ ಕಾರ್ಯ ಸಮನ್ವಯ ಬೈಠಕ್​ನಲ್ಲಿ ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಡಾ.ಮನಮೋಹನ್ ವೈದ್ಯ ಹೇಳಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಮೂರು ದಿನಗಳ ಸಮನ್ವಯ ಬೈಠಕ್​ ನಂತರ ಮಾತನಾಡಿ, ಒಂದು ಪ್ರೇರಣೆಯಿಂದ ಸಮಗ್ರ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಾಜ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸ್ವಯಂಸೇವಕರು ಸಕ್ರಿಯರಾಗಿದ್ದಾರೆ. ಸಂಘ ಕಾರ್ಯ ಆರಂಭಗೊಂಡು 97 ವರ್ಷಗಳಾಗಿವೆ. ಒಟ್ಟು ನಾಲ್ಕು ಹಂತಗಳಲ್ಲಿ ಸಂಘ ಕಾರ್ಯ ವಿಸ್ತಾರವನ್ನು ಪಡೆದುಕೊಂಡಿದೆ. ಮೊದಲ ಹಂತದಲ್ಲಿ ಹಿಂದೂ ಸಮಾಜ ಸಂಘಟಿತವಾಗುತ್ತದೆ. ಎಲ್ಲರೂ ಒಟ್ಟಿಗೆ ಸೇರಿ ಒಂದು ದಿಕ್ಕಿನಲ್ಲಿ ಹೆಜ್ಜೆ ಹಾಕುವುದು ಸಾಧ್ಯವಾಗುತ್ತದೆ. ಒಂದು ಸ್ವರದಲ್ಲಿ, ಒಂದೇ ಮನಸ್ಸಿನಲ್ಲಿ ಭಾರತದ ಕುರಿತು ಮಾತನಾಡುವುದಕ್ಕೆ ಸಾಧ್ಯವಾಗುತ್ತದೆ ಎನ್ನುವ ವಿಶ್ವಾಸವನ್ನು ಸಮಾಜದಲ್ಲಿ ಮೂಡಿಸುವ ಅವಶ್ಯಕತೆ ಇತ್ತು. ಹಾಗಾಗಿ ಮೊದಲ 25 ವರ್ಷಗಳು ಸಂಘಟನೆ ಮತ್ತು ವ್ಯಕ್ತಿ ನಿರ್ಮಾಣಕ್ಕೆ ಮಾತ್ರ ಸಂಘ ಪ್ರಾಮುಖ್ಯತೆಯನ್ನು ಕೊಟ್ಟಿತು ಎಂದರು.

ಸ್ವಾತಂತ್ರ್ಯದ ನಂತರ ಸಂಘ ಕಾರ್ಯ ವಿಸ್ತಾರದ ಎರಡನೇ ಹಂತ ಆರಂಭವಾಯಿತು. ಪ್ರಥಮ ಹಂತದ ಸಂಘ ಕಾರ್ಯದ ಧ್ಯೇಯವನ್ನು ಮುನ್ನಡೆಸುತ್ತಾ ಶಾಖೆಯ ಸಂಪರ್ಕಕ್ಕೆ ಬಾರದ ವಿವಿಧ ಕ್ಷೇತ್ರಗಳ ಜನರನ್ನು ತಲುಪುವುದಕ್ಕಾಗಿ ಸಂಘದ ಸ್ವಯಂಸೇವಕರು ಸಂಘದ ರಾಷ್ಟ್ರೀಯ ವಿಚಾರವನ್ನು ಮೂಲವಾಗಿಸಿಕೊಂಡು ಈ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಸಂಘಟನೆಗಳನ್ನು ಪ್ರಾರಂಭಿಸಿದರು. ಪ್ರಸ್ತುತ 35-36 ವಿವಿ‍ಧ ಸಂಘಟನೆಗಳು ಸಂಘದ ಪ್ರೇರಣೆಯಿಂದ ಮುನ್ನಡೆಯುತ್ತಿವೆ ಎಂದು ನುಡಿದರು.

ಸಂಘ ಪ್ರೇರಿತ ವಿವಿ‍ಧ ಸಂಘಟನೆಗಳಲ್ಲಿ ಕಾರ್ಯನಿರತ ಅನೇಕ ಹೊಸಬರಿಗೆ ಸಂಘದ ಕುರಿತು ತಿಳಿದಿರುವುದಿಲ್ಲ ಹಾಗೂ ಅವರು ಸಂಘದ ಸ್ವಯಂಸೇವಕರಾಗಿರುವುದಿಲ್ಲ. ಹಾಗಾಗಿ ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿರುವ ಅಂತಹ ಹೊಸಬರಿಗೆ ಸಂಘದ ವೈಚಾರಿಕತೆ ಅರ್ಥವಾಗುವುದಕ್ಕಾಗಿ, ಅನ್ಯ ಸಂಘಟನೆಗಳ ಕುರಿತು ತಿಳಿಯುವುದಕ್ಕಾಗಿ ಈ ಸಮನ್ವಯ ಬೈಠಕ್ ಸಾಧ್ಯವಾಗುತ್ತದೆ. ಆ ಸಂಘಟನೆಗಳಲ್ಲಿ ಕಾರ್ಯನಿರತರಾಗಿರುವ ಕಾರ್ಯಕರ್ತರು ನಮ್ಮ ಸಹಯಾತ್ರಿಗಳು ಎಂಬ ಸಮನ್ವಯದ ಮನಸ್ಥಿತಿ ರೂಪುಗೊಳ್ಳುತ್ತದೆ. ಎಲ್ಲರೂ ಒಟ್ಟಾಗಿ ಪರಸ್ಪರ ಪೂರಕವಾಗಿ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತರಾಗಿ ಭಾರತವನ್ನು ಸಮೃದ್ಧ ಭಾರತವನ್ನಾಗಿಸುವ ಕುರಿತು ಬೈಠಕ್​ನಲ್ಲಿ ನಿರ್ಧರಿಸಲಾಯಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net