

ಬೆಂಗಳೂರು: ಸಾಹಿತ್ಯ ಯಾವ ಕ್ರಮದಲ್ಲಿ ರಚೆನೆಯಾಗಬೇಕು ಎಂಬುದನ್ನು ಸಾಂಸತಿಕ ಮಾಫಿಯಾ ತೀರ್ಮಾನಿಸುತ್ತಿದೆ. ಇದರಿಂದ ಸೃಜನಶೀಲ ಸಾಹಿತ್ಯ ಹುಟ್ಟಿಕೊಳ್ಳುವುದಿಲ್ಲ ಎಂದು ಹಿರಿಯ ಸಾಹಿತಿ ಡಾ.ಎಚ್.ಎಸ್. ಶಿವಪ್ರಕಾಶ್ ಹೇಳಿದ್ದಾರೆ.
ಕರ್ನಾಟಕ ಲೇಖಕಿಯರ ಸಂ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 45ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ಸರ್ವಾಧಿಕಾರಿ ಧೋರಣೆ ಹುಟ್ಟಿಕೊಂಡಿದೆ. ಸಂವೇದನೆ ಹುಟ್ಟುಹಾಕುವುದು ಸಾಹಿತ್ಯದ ಮೂಲ ಉದ್ದೇಶ. ಕಾವ್ಯ ಸಮಕಾಲೀನವಾಗಿರುವಂತೆ ಸಾರ್ವಕಾಲಿಕವೂ ಆಗಿರಬೇಕು ಎಂದರು.
ಸಾಹಿತ್ಯ ಕ್ಷೇತ್ರಕ್ಕೆ ಸ್ತ್ರೀಯರ ಪ್ರವೇಶದಿಂದ ಕಾವ್ಯದ ಪರಿಕಲ್ಪನೆ ಹೊಸತನ ಪಡೆದುಕೊಳ್ಳಲು ಸಾಧ್ಯವಾಯಿತು. ಸ್ತ್ರೀಯರೇ ಕಾವ್ಯದ ಬಗ್ಗೆ ಮಾತನಾಡಲು ಆರಂಭಿಸಿದಾಗ, ಪುರುಷರು ರಚಿಸುತ್ತಿದ್ದ ಸ್ತ್ರೀಪರ ಬರಹಗಳನ್ನು ಒಪ್ಪದ ದಿನಗಳು ಪ್ರಾರಂಭವಾದವು. ಇದು ನವ್ಯ ಸಾಹಿತ್ಯದ ಮಾದರಿಗೆ ವಿಕಲ್ಪವನ್ನು ನೀಡಿತು. ಭಾರತೀಯ ಮತ್ತು ಕನ್ನಡ ನವ್ಯಪರಂಪರೆಗೆ ಪರ್ಯಾಯವಾಗಿ ಮಹಿಳಾ ಸಾಹಿತ್ಯ ಹಾಗೂ ದಲಿತ ಸಾಹಿತ್ಯ ಬಂತು ಎಂದು ಅಭಿಪ್ರಾಯಪಟ್ಟರು.
ಜಾನಪದ ತಜ್ಞೆ ಡಾ.ಕೆ.ಆರ್. ಸಂಧ್ಯಾರೆಡ್ಡಿ ಮಾತನಾಡಿ, ನಾಲ್ಕೈದು ಪುಸ್ತಕಗಳನ್ನು ಮುಂದಿಟ್ಟುಕೊಂಡು ಮಹಿಳಾ ಅಧ್ಯಯನ ನಡೆಸಲು ಸಾಧ್ಯವಿಲ್ಲ. ನಿಜವಾದ ಸ್ತ್ರೀ ಚಿತ್ರಣ ಸಿಗುವುದು ಜಾನಪದ ಸಾಹಿತ್ಯದಲ್ಲಿ. ಹೊಸ ತಲೆಮಾರಿನ ಬರಹಗಾರರು ಕಥೆ, ಕಾದಂಬರಿಯಷ್ಟೇ ಬರೆಯುತ್ತಿದ್ದಾರೆ. ಯಾರೊಬ್ಬರೂ ಪ್ರಾಚಿನ ಸಾಹಿತ್ಯದತ್ತ ಗಮನ ನೀಡುತ್ತಿಲ್ಲ. ಹಿರಿಯ ತಲೆಮಾರಿನ ಬಹುತೇಕ ಲೇಖಕಿಯರು ಸಾಕಷ್ಟು ಸಂಖ್ಯೆಯಲ್ಲಿ ಶಾಸ್ತ್ರೀಯ ಸಾಹಿತ್ಯ, ಅನುವಾದ ಸಾಹಿತ್ಯ ಕೃತಿಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಷ್ಪ, ಪತ್ರಕರ್ತ ಚ.ಹ. ರಘುನಾಥ, ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ಇನ್ನಿತರರಿದ್ದರು.
ಮಂಜುಳಾ ಹಿರೇಮಠ, ದೇವಿಕಾ ನಾಗೇಶ್, ಅಕ್ಷತಾ ಹುಂಚದಕಟ್ಟೆ, ಡಾ.ಚಂದ್ರಮತಿ ಸೋಂದಾ, ಡಾ.ಬಿ.ರೇವತಿ ನಂದನ್, ಸರಸ್ವತಿ ಭೋಸಲೆ, ವಿಜಯಾ ಶಂಕರ, ಮಾಧವಿ ಭಂಡಾರಿ ಕೆರೆಕೋಣ, ನೂತನ ದೋಶೆಟ್ಟಿ, ಸುಮಾ ರಮೇಶ್, ಡಾ.ರಾಧಾ ಕುಲಕರ್ಣಿ, ಕಾವ್ಯಾ ಕಡಮೆ, ಲೀಲಾ ವಾಸುದೇವ್, ಸುಧಾ ಆಡುಕಳ, ಫೌಝಿಯಾ ಸಲೀಂ, ಸಿಂಧುಚಂದ್ರ, ಡಾ.ಶೋಭಾ ನಾಯಕ, ಡಾ.ಮಂಜುಳಾ ಗೋನಾಳ, ಮಾಲತಿ ಹೆಗಡೆ, ಡಾ.ಕಾತ್ಯಾಯಿನಿ ಕುಂಜಿಬೆಟ್ಟು.
ಸಮಕಾಲೀನ ಸಾಹಿತ್ಯ ವಿಮರ್ಶಿಸುವಾಗ ನವ್ಯ, ನವ್ಯೋತ್ತರ ಎಂಬ ಪದ ಬಳಕೆಯಾಗುತ್ತವೆ. ಪಶ್ಚಿಮದ ರೀತಿಯಲ್ಲಿದ್ದಂತೆ ನವ್ಯೋತ್ತರ ನಮ್ಮಲ್ಲಿ ಇದೆಯೇ? ಚರಿತ್ರೆಕಾರರು ಪಶ್ಚಿಮ ಸಾಹಿತ್ಯದ ಭೂಪಟವನ್ನು ನಮ್ಮ ಸಾಹಿತ್ಯದ ಮೇಲೆ ಹೇರಲು ಪ್ರಯತ್ನಿಸುತ್ತಾರೆ. ನವ್ಯ ಹಳತಾದಾಗ ಹೊಸತನ್ನು ಹೊಸತನ್ನು ಗುರುತಿಸುವ ಪ್ರಯತ್ನ ವಿಮರ್ಶಕರಿಂದ ಆಗುತ್ತಿಲ್ಲ.
-ಡಾ.ಎಚ್.ಎಸ್. ಶಿವಪ್ರಕಾಶ್, ಸಾಹಿತಿ