

ಬೆಂಗಳೂರು: ರಾಜ್ಯದ ಗಡಿ ಹಾಗೂ ನದಿಗಳ ವಿವಾದಗಳಿಗೆ ಸಂಬಂಧಿಸಿದಂತೆ ನಿಗಾವಹಿಸಿ ಕಾನೂನು ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಸಮಯೋಚಿತ ಕ್ರಮ ಕೈಗೊಳ್ಳಲು ಸರ್ಕಾರವು ಸಮರ್ಥ ಸಚಿವರನ್ನು ಉಸ್ತುವಾರಿಯಾಗಿ ನೇಮಿಸಿರುವುದಕ್ಕೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಭಿನಂದಿಸಿದ್ದಾರೆ.
ಐದು ರಾಜ್ಯಗಳಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿಭಾಗದಲ್ಲಿನ ಜನರ ನೋವು ನಲಿವುಗಳನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಸಂವೇದನಾತ್ಮಕವಾದ ಪರಿಹಾರ ಹುಡುಕಲು ಕರ್ನಾಟಕ ಸರ್ಕಾರವು ಉಸ್ತುವಾರಿ ಸಚಿವರನ್ನು ನೇಮಿಸಿರುವುದು ಸ್ವಾಗತಾರ್ಹ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಗಡಿ ವಿವಾದಕ್ಕೆ ಸಂಬಂದಿಸಿದಂತೆ ಇಬ್ಬರು ಉಸ್ತುವಾರಿ ಸಚಿವರನ್ನು ನೇಮಿಸಿದ್ದು, ರಾಜ್ಯ ಸರ್ಕಾರವು ಕೈಗೊಂಡ ಈ ಕ್ರಮ ಸಕಾಲಿಕವಾಗಿದೆ. ಅನುಭವಿ ಸಚಿವರಾದ ಎಚ್.ಕೆ.ಪಾಟೀಲ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿರುವುದು ಗಡಿಭಾಗದ ಕನ್ನಡಿಗರಿಗೆ ನೈತಿಕ ಧೈರ್ಯ ಬಂದಂತಾಗಿದೆ ಎಂದು ಡಾ.ಸೋಮಶೇಖರ್ ತಿಳಿಸಿದ್ದಾರೆ.