

ಬೆಂಗಳೂರು: ಕರೊನಾ ವೈರಸ್ ಸೋಂಕು ಹರಡುವಿಕೆ ತಪ್ಪಿಸಲು ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕು ಎಂದು ಹೊರಡಿಸಿರುವ ಆದೇಶವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲ ಕಂಪನಿಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕು ಎಂಬ ನಿರ್ದೇಶನ ನೀಡಲಾಗಿದೆ. ಎಲ್ಲರೂ ಪಾಲಿಸಬೇಕು ಎಂದರು.
ಐಟಿ- ಬಿಟಿ, ಸ್ಟಾರ್ಟ್ ಅಪ್ ಕಂಪನಿಗಳ ಮುಖ್ಯಸ್ಥರ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಸಚಿವರು ನಂತರ ಮಾತನಾಡಿದರು.
ಕರೊನಾ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ವಿವರಿಸಿದರು. ಅಲ್ಲದೆ ಕಂಪನಿ ಮುಖ್ಯಸ್ಥರಿಂದ ಸಲಹೆ ಕೂಡ ಪಡೆದರು.
ವೈರಸ್ ನಿಯಂತ್ರಣಕ್ಕಾಗಿ ಐಟಿ, ಬಿಟಿ, ಸ್ಟಾರ್ಟ್ ಅಪ್ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಮೊದಲೆ ಸರ್ಕಾರ ಸೂಚಿಸಿತ್ತು. ಆದರೆ, ಕೆಲವು ಕಡೆ ಇದು ಜಾರಿ ಆಗಿರಲಿಲ್ಲ ಎಂಬ ದೂರು ಕೇಳಿಬಂದಿತ್ತು. ಈಗ ಈ ನಿಯಮವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಸಂಬಂಧ ಸರ್ಕಾರ ಶೀಘ್ರವೇ ನಿರ್ದೇಶನ ನೀಡಲಿದೆ. ಸರ್ಕಾರವೇ ನೀತಿ ಜಾರಿಗೆ ತರಲಿ ಎಂಬುದನ್ನು ಬಿಟ್ಟು ಕಂಪನಿಗಳೇ ಅಗತ್ಯ ನಿರ್ಣಯ ಕೈಗೊಳ್ಳಬೇಕು ಎಂದರು.
ಸರ್ಕಾರಿ ಕಚೇರಿಗೆ ಒದಗಿಸುವ ಸೇವೆ, ಆರೋಗ್ಯ ಹಾಗೂ ಬ್ಯಾಂಕಿಂಗ್ ಮುಂತಾದ ಅಗತ್ಯ ಸೇವೆ ನೀಡುವ ಐಟಿ ಉದ್ಯೋಗಿಗಳನ್ನು ಮಾತ್ರ ಕಚೇರಿಗೆ ಕರೆಸಲಾಗುತ್ತಿದೆ. ಕೆಲ ಸೇವೆಗಳಲ್ಲಿ ಗೌಪ್ಯತೆ ಕಾಯ್ದುಕೊಳ್ಳುವ ಅನಿವಾರ್ಯತೆಯೂ ಇದೆ. ಉಳಿದಂತೆ ಬಹುತೇಕರು ಮನೆಯಿಂದಲೆ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದು ಐಟಿ ಕಂಪನಿ ಮುಖ್ಯಸ್ಥರು ನಮಗೆ ತಿಳಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಬಿಟಿ ವಿಷನ್ ಗ್ರೂಪ್ ಸದಸ್ಯೆ ಡಾ. ಕಿರಣ್ ಮಜುಂದಾರ್ ಷಾ ಮಾತನಾಡಿ, ಸಾಂಕ್ರಾಮಿಕ ರೋಗಗಳ ತಡೆಗೆ ಪ್ರತ್ಯೇಕ ಆಸ್ಪತ್ರೆಯನ್ನು ಸರ್ಕಾರ ನಿರ್ಮಿಸಿದರೆ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಹಣ ನೀಡಲಾಗುವುದು ಎಂದರು.
ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ ಮಾತನಾಡಿ ಕರೊನಾದಿಂದ ಆರ್ಥಿಕತೆಗೆ ಸಂಕಷ್ಟ ಎದುರಾಗಿದೆ. ಹಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಸಣ್ಣ ಉದ್ದಿಮೆದಾರರು ಸಾಲದ ಕಂತು ಕಟ್ಟಲಾಗದೇ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ ರಮಣರೆಡ್ಡಿ, ವೈದ್ಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಐಟಿಬಿಟಿ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ವಿಜ್ಞಾನ ತಂತ್ರಜ್ಞಾನ ಸಂವಹನದ ಅಧ್ಯಕ್ಷ ಜಗದೀಶ್ ಪಟಾಂಕರ್ ಹಾಗೂ ಸ್ಟಾರ್ಟ್‌ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಇದ್ದರು.