VEDIO | ಕರೊನಾ ವೈರಸ್​ ಸೋಂಕು: ಕೊಡಗಿನ ವಿರಾಜಪೇಟೆಗೆ ದಿಗ್ಬಂಧನ

Corona
Published on

ಮಡಿಕೇರಿ: ಕೊಡಗು ಮೂಲದ ಕರೊನಾ ವೈರಸ್​ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ 300 ಮಂದಿಯಲ್ಲಿ ಕೇವಲ 5 ಮಂದಿ ಮಾತ್ರ ಸ್ವಯಂ ಪ್ರೇರಿತವಾಗಿ ತಪಾಸಣೆಗೆ ಒಳಗಾಗಿದ್ದಾರೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್​ ಕಣ್ಮಣಿ ಜಾಯ್​ ತಿಳಿಸಿದ್ದಾರೆ.

ವಿದೇಶದಿಂದ ಬಂದ ಆತ ಬೆಂಗಳೂರಿನ ಬ್ಯಾಟರಾಯನಪುರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ರಾಜಹಂಸ ಬಸ್​ನಲ್ಲಿ ಕೊಡಗಿಗೆ ಆಗಮಿಸಿದ್ದ. ಆ ಬಸ್​ನಲ್ಲಿ 32 ಮಂದಿ ಪ್ರಯಾಣಿಕರು ಇದ್ದರು. ಅಲ್ಲದೆ ಬಸ್​ ಮದ್ದೂರಿನಲ್ಲಿ ಹೋಟೆಲ್​ನಲ್ಲಿ ನಿಲುಗಡೆ ಮಾಡಿತ್ತು. ಹೀಗಾಗಿ ಆತ ಅಂದಾಜು 300 ಮಂದಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ. ಇವರಲ್ಲಿ ಕೇವಲ 5 ಮಂದಿ ಮಾತ್ರ ತಪಾಸಣೆಗೆ ಒಳಗಾಗಿದ್ದಾರೆ. ಇವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆಗೆ ಪರೀಕ್ಷೆಗೆ ಕಳುಹಿಸಲಾಗಿದೆ ಶೀಘ್ರದಲ್ಲೇ ವರದಿ ಬರಲಿದೆ ಎಂದರು.

ವಿರಾಜಪೇಟೆಯ ಮೂವರು ಶಿಕ್ಷಕರು ಸಂಪರ್ಕಕ್ಕೆ ಬಂದಿದ್ದರು: ಸೋಂಕಿತ ವ್ಯಕ್ತಿಯೊಂದಿಗೆ ಬೆಂಗಳೂರಿನಿಂದ ಮಡಿಕೇರಿಗೆ ಬಂದ ರಾಜಹಂಸ ಬಸ್​ನಲ್ಲಿ ವಿರಾಜಪೇಟೆ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಇದ್ದರು. ಅವರು ಬಸ್​ ಇಳಿದು ನೇರವಾಗಿ ಶಾಲೆಗೆ ತೆರಳಿದ್ದರು. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ವಿರಾಜಪೇಟೆಯಲ್ಲಿ ಶಿಕ್ಷಕರೊಂದಿಗೆ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕೆಲಸದಲ್ಲಿ ತೊಡಗಿದ್ದಾರೆ. ತಹಸೀಲ್ದಾರ್​ ವಿರಾಜಪೇಟೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ವಿರಾಜಪೇಟೆಯಲ್ಲಿ 75 ಮನೆಗಳು ಇದ್ದು ಯಾರು ಕೂಡ ಹೊರಗೆ ಹೋಗದಂತೆ ಸೂಚಿಸಲಾಗಿದೆ. ಅಂಗಡಿಗಳನ್ನು ಮುಚ್ಚಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net