

Dowry harassment: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ 26 ವರ್ಷದ ನಿಕ್ಕಿ ಭಾಟಿಯಾ ಭೀಕರ ಸಾವು ಮಾಸುವ ಮುನ್ನವೇ, ಅಂತಹದೇ ಘಟನೆ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದ್ದು ಪತಿಯೊಬ್ಬ ತನ್ನ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಬುಧವಾರ(ಆಗಸ್ಟ್ 27) ಎನ್ಡಿಟಿವಿ ವರದಿ ಮಾಡಿದೆ.
ಅಮ್ರೋಹ್ ಜಿಲ್ಲೆಯ ನಾರಂಗ್‌ಪುರ ಗ್ರಾಮದಲ್ಲಿ ನಡೆದಿದ್ದು, ಸಂತ್ರಸ್ತೆ 32 ವರ್ಷದ ನರ್ಸ್ ಪಾರುಲ್ ಎಂದು ಗುರುತಿಸಲಾಗಿದೆ. ಪಾರುಲ್ಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಗಂಭೀರ ಸ್ಥಿತಿ ಹಿನ್ನೆಲೆ ದೆಹಲಿ ಉನ್ನತ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ.
ಸಂತ್ರಸ್ತೆ ಪತಿ ದೇವೇಂದ್ರ ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿದ್ದಾರೆ. ಸಂತ್ರಸ್ತೆ ಪಾರುಲ್ ಮತ್ತು ದೇವೇಂದ್ರ ಸುಮಾರು 13 ವರ್ಷಗಳ ಹಿಂದೆ ವಿವಾಹವಾಗಿದ್ದಾರೆ. ದಂಪತಿಗೆ ಅವಳಿ ಮಕ್ಕಳು, ಒಂದು ಗಂಡು ಮತ್ತು ಒಂದು ಹೆಣ್ಣು ಇದೆ ಎನ್ನಲಾಗಿದೆ. ಇತ್ತೀಚೆಗೆ ದೇವೇಂದ್ರ ರಾಂಪುರದಿಂದ ಬರೇಲಿಗೆ ವರ್ಗಾವಣೆಗೊಂಡು ರಜೆಯ ಮೇಲೆ ಮನೆಯಲ್ಲಿದ್ದರು. ವರದಕ್ಷಿಣೆ ಬೇಡಿಕೆ ಈಡೇರದ ಕಾರಣ ಅವರು ಮತ್ತು ಅವರ ಸಂಬಂಧಿಕರು ಪಾರುಲ್‌ಳನ್ನು ಜೀವಂತವಾಗಿ ಸುಟ್ಟುಹಾಕಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಪಾರುಲ್ ಸಹೋದರ ದೂರು ದಾಖಲಿಸಿದ್ದಾರೆ. ಪತಿ ದೇವೇಂದ್ರ, ಆತನ ತಾಯಿ ಹಾಗೂ ಸೋನು, ಗಜೇಶ್, ಜಿತೇಂದ್ರ ಮತ್ತು ಸಂತೋಷ್ ಎಂಬ ನಾಲ್ವರು ಪುರುಷ ಸಂಬಂಧಿಕರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ. ಕೌಟುಂಬಿಕ ಹಿಂಸೆ ಮತ್ತು ಕೊಲೆಯತ್ನದ ಗಂಭೀರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರು ಆರೋಪಿಗಳು ಪ್ರಸ್ತುತ ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಸಂತ್ರಸ್ತೆ ತಾಯಿ ಅನಿತಾ, ಮಂಗಳವಾರ ಮುಂಜಾನೆ ನೆರೆಹೊರೆಯವರು ತಮಗೆ ಮಾಹಿತಿ ನೀಡಿದ್ದರು. ನಾನು ಸ್ಥಳಕ್ಕೆ ತಲುಪಿದಾಗ ನನ್ನ ಮಗಳು ನೋವಿನಿಂದ ನರಳುತ್ತಿದ್ದಳು. ತೀವ್ರವಾಗಿ ಸುಟ್ಟು ಹೋಗಿದ್ದಳು. ಅವಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಆಕೆಯ ಸ್ಥಿತಿ ಗಂಭೀರವಾದ ಕಾರಣ ದೆಹಲಿಗೆ ಕರೆದೊಯ್ಯಬೇಕಾಯಿತು. ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)