

ಬೆಂಗಳೂರು: ಪೃಥ್ವಿ ಅಂಬರ್ ಮತ್ತು ಅಯಾನ ನಾಯಕ-ನಾಯಕಿಯಾಗಿರುವ 'ದೂರದರ್ಶನ' ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. ಚಿತ್ರವು ಮಾರ್ಚ್ 3ಕ್ಕೆ ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದೆ.
'ದೂರದರ್ಶನ', ಸುಕೇಶ್ ಶೆಟ್ಟಿ ಅಭಿನಯದ ಮೊದಲ ಚಿತ್ರ. ಒಂದು ಪುಟ್ಟ ಹಳ್ಳಿಗೆ 80ರ ದಶಕದಲ್ಲಿ ಟಿವಿ ಬಂದಾಗ, ಅಲ್ಲೇನಾಯಿತು ಎಂಬ ಕಥೆ ಇರುವ ಚಿತ್ರ ಇದು. ಈ ಚಿತ್ರದ ಕುರಿತು ಮಾತನಾಡುವ ಸುರೇಶ್, 'ಈ ಚಿತ್ರ ಒಂದಷ್ಟು ವಿಷಯಗಳಿಗೆ ಸ್ಪೆಷಲ್ ಎನಿಸಿಕೊಳ್ಳುತ್ತದೆ. ರೆಗ್ಯೂಲರ್ ಸ್ಟೈಲ್ ಬಿಟ್ಟು ತುಂಬಾ ಆಪ್ತವಾಗೋ ಹಾಗೆ ಸಿನಿಮಾವನ್ನು ನರೇಟ್ ಮಾಡಲಾಗಿದೆ. ಎರಡು ಕಾಲು ಗಂಟೆ ಒಂದು ಊರೊಳಗೆ ಹೋಗಿ ಎಂಜಾಯ್ ಮಾಡಿದ ಅನುಭವವನ್ನು ಈ ಸಿನಿಮಾ ಪ್ರತಿಯೊಬ್ಬರಿಗೂ ನೀಡಲಿದೆ' ಎನ್ನುತ್ತಾರೆ.
ಈ ಸಿನಿಮಾ ಎಲ್ಲರಿಗೂ ತುಂಬಾ ಹತ್ತಿರ ಆಗುತ್ತೆ ಎನ್ನುವ ನಾಯಕ ಪೃಥ್ವಿ, 'ಒಂದು ಕಾದಂಬರಿ ಓದಿದ ಅನುಭವವನ್ನು ಈ ಸಿನಿಮಾ ಎಲ್ಲರಿಗೂ ನೀಡುತ್ತದೆ. ನಾನು ಮನು ಎಂಬ ಪಾತ್ರ ಮಾಡಿದ್ದೇನೆ. ಬಾಲ್ಯದಲ್ಲಿ ಮಾಡಿದ ತರಲೆ ಎಲ್ಲವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. 'ದೂರದರ್ಶನ' ಒಂದು ಒಳ್ಳೆಯ ಕಟೆಂಟ್ ಸಿನಿಮಾ. ಲವ್ ಸ್ಟೋರಿ, ಕಾಮಿಡಿ, ಎಮೋಷನ್ಸ್ ಎಲ್ಲವೂ ಈ ಚಿತ್ರದಲ್ಲಿದೆ' ಎನ್ನುತ್ತಾರೆ.
'ದೂರದರ್ಶನ' ಚಿತ್ರವನ್ನು ನಿರ್ಮಿಸಿರುವವರು ರಾಜೇಶ್ ಭಟ್. ಈ ಚಿತ್ರದಲ್ಲಿ ಪೃಥ್ವಿ ಮತ್ತು ಆಯನಾ ಜತೆಗೆ 'ಉಗ್ರಂ' ಮಂಜು, ಸುಂದರ್ ವೀಣಾ, ಹರಿಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.