ರಾಷ್ಟ್ರೀಯ ಭದ್ರತೆಯಲ್ಲಿ ರಾಜಕಾರಣ ಬೇಡ; ರಾಹುಲ್​ ಗಾಂಧಿಗೆ ಶರದ್​ ಪವಾರ್​ ಪಾಠ

pawar_gandhi
Published on

ಮುಂಬೈ/ಪುಣೆ: ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್​ ಪಾರ್ಟಿಯ (ಎನ್​ಸಿಪಿ) ಅಧ್ಯಕ್ಷ ಶರದ್​ ಪವಾರ್​ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿಗೆ ಬುದ್ಧಿಮಾತು ಹೇಳಿದ್ದಾರೆ.

ಚೀನಾದ ಯೋಧರೊಂದಿಗಿನ ಗಲ್ವಾನ್​ ಕಣಿವೆಯಲ್ಲಿನ ರಕ್ತಸಿಕ್ತ ಘರ್ಷಣೆಯ ಬಳಿಕ ಕಾಂಗ್ರೆಸ್​ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ಕಾಂಗ್ರೆಸ್​ ತಾರಾಮಾರ ತರಾಟೆಗೆ ತೆಗೆದುಕೊಳ್ಳುತ್ತಿದೆ. ಅಲ್ಲದೆ, ಭಾರತದ ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ ಎಂದು ಟೀಕಿಸುತ್ತಿದೆ. ಅಲ್ಲದೆ, ಚೀನಿಯರು ಭಾರತದ ಭೂಭಾಗವನ್ನು ಪ್ರವೇಶಿಸಿದ್ದರೆ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಒತ್ತಡ ಹೇರುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶರದ್​ ಪವಾರ್​, 1962ರಲ್ಲಿ ಚೀನಾ ನಮ್ಮ 45 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಆಕ್ರಮಿಸಿಕೊಂಡಿತು. ಇದನ್ನು ನಾವು ಯಾರೂ ಮರೆಯಬಾರದು. ಆ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಹಾಲಿ ಸರ್ಕಾರವನ್ನು ಟೀಕಿಸಬೇಕಾಗುತ್ತದೆ. ಇದರು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ. ಆದ್ದರಿಂದ, ಈ ವಿಷಯವಾಗಿ ರಾಜಕಾರಣ ಮಾಡುವುದು ತಪ್ಪಾಗುತ್ತದೆ ಎಂದು ರಾಹುಲ್​ ಗಾಂಧಿಗೆ ಅವರು ತಿಳಿಹೇಳಿದ್ದಾರೆ.

ಗಲ್ವಾನ್​ ಕಣಿವೆಯ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವನ್ನು ಹೊಣೆಯಾಗಿಸುವುದು ತಪ್ಪಾಗುತ್ತದೆ. ನಮ್ಮ ಯೋಧರು ಚೀನಾದ ಯೋಧರನ್ನು ಹಿಂದಕ್ಕೆ ತಳ್ಳಲು ಯತ್ನಿಸಿದರು. ಇದು ರಕ್ಷಣಾ ಸಚಿವರು ಅಥವಾ ಇನ್ನು ಯಾರದಾದರೂ ತಪ್ಪು ಎಂದು ಹೇಳಲಾಗುವುದಿಲ್ಲ. ನಮ್ಮ ಯೋಧರು ಎಚ್ಚರಿಕೆಯಿಂದ ಇರದಿದ್ದರೆ ಚೀನಾದವರ ಅತಿಕ್ರಮಣ ಗಮನಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಘರ್ಷಣೆಯಾಗಿದೆ ಎಂದಾದರೆ, ನಮ್ಮವರು ಎಚ್ಚರಿಕೆಯಿಂದ ಇದ್ದರು ಎಂದೇ ಅರ್ಥ. ಇಲ್ಲವಾದಲ್ಲಿ ಇದು ನಮಗೆ ಗೊತ್ತೇ ಆಗುತ್ತಿರಲಿಲ್ಲ. ಆದ್ದರಿಂದ, ಸರ್ಕಾರದ ವಿರುದ್ಧ ಈ ರೀತಿಯ ಆರೋಪಗಳನ್ನು ಮಾಡುವುದು ತಪ್ಪಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗಲ್ವಾನ್​ ಕಣಿವೆಯ ಗಸ್ತು ಪಾಯಿಂಟ್​ 14ರಲ್ಲಿ ಚೀನಾದ ಯೋಧರು ವೀಕ್ಷಣಾ ಗೋಪುರ ನಿರ್ಮಿಸಿದ್ದನ್ನು ತೆಗೆಯುವಂತೆ ಭಾರತದ ಯೋಧರು ಹೇಳಲು ಹೋದಾಗ ಚೀನಾದ ಯೋಧರು ಮಳ್ಳುತಂತಿ ಸುತ್ತಿದ್ದ ಬಡಿಗೆ, ಕಬ್ಬಿಣದ ರಾಡುಗಳನ್ನು ಬಳಸಿ ಭಾರತೀಯ ಯೋಧರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದರು. ಈ ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾದ 43ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾಗಿ ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net