ನ್ಯಾಯದ ಅಪಹಾಸ್ಯ ಮಾಡಬೇಡಿ; NIAಗೆ ಸುಪ್ರೀಂಕೋರ್ಟ್​ ಛೀಮಾರಿ ಹಾಕಿದ್ಯಾಕೆ

Untitled-design-2024-07-03T193808.630
Published on

ನವದಹೆಲಿ: ನಕಲಿ ನೋಟು ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಆರೋಪಿಗೆ ಜಾಮೀನು ನೀಡುವಾಗ, ವಿಚಾರಣೆಯನ್ನು ವಿಳಂಬಗೊಳಿಸಿದ್ದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಸುಪ್ರೀಂಕೋರ್ಟ್ ಬುಧವಾರ (ಜುಲೈ 3) ಛೀಮಾರಿ ಹಾಕಿದೆ. ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಉಜ್ಜಲ್ ಭುಯಾನ್ ಅವರ ವಿಭಾಗೀಯ ಪೀಠವು ಆರೋಪಗಳ ಎಷ್ಟೇ ಗಂಭೀರತೆಯಾಗಿದ್ದರೂ, ಭಾರತೀಯ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಪ್ರತಿಯೊಬ್ಬ ಆರೋಪಿಗೂ ತ್ವರಿತ ವಿಚಾರಣೆಗೆ ಹಕ್ಕಿದೆ ಎಂದು ಹೇಳಿದೆ.

ನೀವು ಎನ್‌ಐಎ, ನ್ಯಾಯವನ್ನು ಅಪಹಾಸ್ಯ ಮಾಡಬೇಡಿ. ಆರೋಪಿಯು ಗಂಭೀರ ಅಪರಾಧವನ್ನು ಮಾಡಿರಬಹುದು. ಆದರೆ ವಿಚಾರಣೆಯನ್ನು ಪ್ರಾರಂಭಿಸಲು ನೀವು ಬಾಧ್ಯತೆಯಲ್ಲಿದ್ದೀರಿ. ನಾಲ್ಕು ವರ್ಷ ಕಳೆದರೂ ವಿಚಾರಣೆ ಆರಂಭವಾಗಿಲ್ಲ. ಇದು ಸರಿಯಲ್ಲ. ಆತನಿಗೆ ತ್ವರಿತ ನ್ಯಾಯದಾನದ ಹಕ್ಕಿದೆ. ಈಗ ಒಂದು ಮಾತನ್ನೂ ಹೇಳಬೇಡಿ ಎಂದು ಪೀಠವು ಕಟುವಾಗಿ ಟೀಕಿಸಿತು.

ಕೇಂದ್ರೀಯ ಸಂಸ್ಥೆಯು 80 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲು ಪ್ರಸ್ತಾಪಿಸಿದೆ ಎಂದು ಗಮನಿಸಿದಾಗ, ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ, "ಅವರು ಎಷ್ಟು ವರ್ಷ ಜೈಲಿನಲ್ಲಿ ಇರಬೇಕೆಂದು ನಮಗೆ ತಿಳಿಸಿ?" ಎಂದು ಕೇಳಿದೆ. ಎನ್‌ಐಎ ಪರ ವಕೀಲರು ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರೂ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಲು ನಿರಾಕರಿಸಿತು.

ಪ್ರಕರಣದ ಇಬ್ಬರು ಸಹ ಆರೋಪಿಗಳು ಈಗಾಗಲೇ ಜಾಮೀನು ಪಡೆದಿರುವ ಅಂಶವನ್ನು ಗಮನಿಸಿದ ಸುಪ್ರೀಂಕೋರ್ಟ್, ಬಾಂಬೆ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು. ವಿಚಾರಣಾ ನ್ಯಾಯಾಲಯ ವಿಧಿಸಿದ ಷರತ್ತುಗಳಿಗೆ ಒಳಪಟ್ಟು ಆರೋಪಿ ಜಾವೇದ್ ಗುಲಾಂ ನಬಿ ಶೇಖ್‌ಗೆ ಜಾಮೀನು ನೀಡಿತು. ಜತೆಗೆ ಆರೋಪಿಗಳು ಪ್ರತಿ 15 ದಿನಗಳಿಗೊಮ್ಮೆ ಮುಂಬೈನ ಎನ್‌ಐಎ ಕಚೇರಿಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಿದೆ. ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ ಫೆಬ್ರವರಿ 2024ರ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಆರೋಪಿಗಳು ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net